ಬೆಂಗಳೂರು: ರಾಜ್ಯದಲ್ಲಿ ಗಣೇಶೋತ್ಸವದ ಸಂಭ್ರಮದ ನಡುವೆಯೇ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಿಮ್ಮ ಮನೆಯೊಳಗೆ ಗಣಪತಿ ಪ್ರತಿಷ್ಠಾಪನೆ ಮಾಡಲು ಕೂಡ ಸರ್ಕಾರದ ಅನುಮತಿ ಪಡೆಯುವ ದುಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಎಚ್ಚರಿಸಿದ್ದಾರೆ. ಟಿ ನರಸೀಪುರದಲ್ಲಿ ಗಣೇಶ ಸಮಿತಿ ಯುವಕರಿಗೆ ಪೊಲೀಸರು ನೀಡುತ್ತಿರುವ ಬೆದರಿಕೆ ಹಾಗೂ ಮೆರವಣಿಗೆಗೆ ವಿಧಿಸಿರುವ ಕಠಿಣ ಷರತ್ತುಗಳ ವಿರುದ್ಧ ಅಶೋಕ್ ಕೆಂಡಾಮಂಡಲವಾಗಿದ್ದಾರೆ.
ತಾಲಿಬಾನಿ ಸರ್ಕಾರ
ರಾಜ್ಯ ಸರ್ಕಾರದ ಧೋರಣೆಯನ್ನು ಅತ್ಯಂತ ಕಟು ಶಬ್ದಗಳಲ್ಲಿ ಟೀಕಿಸಿರುವ ಆರ್ ಅಶೋಕ್, ಡಿಕೆ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗೂಂಡಾ ಸರ್ಕಾರ ಮತ್ತು ತಾಲಿಬಾನಿ ಸರ್ಕಾರ ಎಂದು ಕರೆದಿದ್ದಾರೆ. ಬ್ರಿಟಿಷರ ಆಡಳಿತದ ಅವಧಿಯಲ್ಲಿ ಕೂಡ ಗಣೇಶೋತ್ಸವಕ್ಕೆ ಇಷ್ಟೊಂದು ನಿರ್ಬಂಧಗಳು ಇರಲಿಲ್ಲ. ಆದರೆ ಈ ಕಾಂಗ್ರೆಸ್ ಸರ್ಕಾರ ತನ್ನ ಮತಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ಹಬ್ಬಗಳ ಆಚರಣೆಯ ಮೇಲೆ ಸವಾರಿ ಮಾಡುತ್ತಿದೆ. ಈ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಅವರು ಗುಡುಗಿದ್ದಾರೆ.
ಮಸೀದಿ ಮೈಕುಗಳ ಮೇಲೆ ಯಾಕಿಲ್ಲ ಸುಪ್ರೀಂ ಕೋರ್ಟ್ ನಿಯಮ
ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಪೊಲೀಸರು ಗಣೇಶ ಸಮಿತಿಗಳಿಗೆ ನೀಡಿರುವ ನೋಟಿಸ್ ಬಗ್ಗೆ ಪ್ರಶ್ನಿಸಿರುವ ಅಶೋಕ್, ಸುಪ್ರೀಂ ಕೋರ್ಟ್ ನಿರ್ದೇಶನಗಳು ಕೇವಲ ಹಿಂದೂ ಹಬ್ಬಗಳಿಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದ್ದಾರೆ. ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ, ಅಲ್ಲಿಗೆ ಹೋಗಿ ಪರಿಶೀಲನೆ ನಡೆಸುವ ಧೈರ್ಯ ಈ ಸರ್ಕಾರಕ್ಕೆ ಇದೆಯೇ? ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಡೆಸಿಬಲ್ ಮಿತಿಯ ಬಗ್ಗೆ ಅವರಿಗೆ ಏಕೆ ಎಚ್ಚರಿಕೆ ನೀಡುತ್ತಿಲ್ಲ? ಎಂದು ಅವರು ಕಿಡಿಕಾರಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು, ಆದರೆ ಇಲ್ಲಿ ಒಂದು ಸಮುದಾಯದ ಓಲೈಕೆ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.
ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೆ ಸಾಫ್ಟ್ ಕಾರ್ನರ್
ರಾಜ್ಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗಳ ಸಂದರ್ಭದಲ್ಲಿ ಮೃದು ಧೋರಣೆ ತಳೆಯುವ ಸರ್ಕಾರ, ಹಿಂದೂಗಳ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಮಾತ್ರ ಹತೋಟಿ ಹೇರಲು ಮುಂದಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ಅಶೋಕ್ ಹೇಳಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಆಚರಣೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಹಿಂದೂ ಸಮಾಜ ಇದನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.








