ವಿಜಯಪುರ: ಜಿಲ್ಲೆಯ ರೈತರಿಗೆ ವಕ್ಫ್ ಬೋರ್ಡ್ ನಿಂದ ಆತಂಕವೊಂದು ಎದುರಾಗಿದೆ.
ನೂರಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ಬಂದಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಕ್ಷೇತ್ರದ ಹೊನವಾಡ ಗ್ರಾಮದ 15 ರೈತರಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ಬಂದಿದೆ.
ನೋಟಿಸ್‌ನಲ್ಲಿ ನಿಮ್ಮ ಜಮೀನು ವಕ್ಫ್ ಆಸ್ತಿಯಾಗಿದ್ದು, ಪಹಣಿ ಪತ್ರದಲ್ಲಿ ಕಾಲಂ ನಂ 11 ಹಾಗೂ 9ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಸೂಚಿಸಲಾಗಿದೆ. ಆದರೆ, ವಿಜಯಪುರ ಜಿಲ್ಲಾಧಿಕಾರಿಗಳು, ನೋಟಿಸ್‌ಗೆ ರೈತರು ಹೆದರುವ ಅವಶ್ಯಕತೆ ಇಲ್ಲ. ಸಂಬಂಧಪಟ್ಟ ಕಚೇರಿಗಳಿಗೆ ದಾಖಲೆ ನೀಡಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಂಸದ ಹಾಗೂ ವಕ್ಫ್ ಜಂಟಿ ಸದನ ಸಮಿತಿಯ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿರುವ ರೈತರು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಕೆರೆ ಜಾಗವನ್ನು ವಕ್ಫ್ ತನ್ನ ಆಸ್ತಿ ಎಂದು ನೋಟಿಸ್ ಜಾರಿ ಮಾಡಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿಯೂ ಕೂಡ ವಕ್ಫ್ ಅಕ್ರಮವಾಗಿ ಆಸ್ತಿ ಕಬಳಿಕೆಗೆ ಮುಂದಾಗಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.