ಯಾದಗಿರಿ: ವಿಜಯಪುರ, ಧಾರವಾಡದ ನಂತರ ಯಾದಗಿರಿ (Yadagiri) ಜಿಲ್ಲೆಯ ರೈತರಿಗೂ ವಕ್ಫ್ ಆತಂಕ ಶುರುವಾಗಿದೆ.
ಸಾವಿರಕ್ಕೂ ಅಧಿಕ ರೈತರಿಗೆ ವಕ್ಫ್ ಬೋರ್ಡ್ (Waqf Board) ಶಾಕ್ ನೀಡಿದೆ. ಯಾದಗಿರಿ ಜಿಲ್ಲೆಯ ರೈತರ ಭೂಮಿ (Farmers Land) ಪಹಣಿ ಕಾಲಂ ನಂಬರ್ 11 ರ ಮೇಲೆ ವಕ್ಪ್ ಎಂದು ನಮೂದಾಗಿದ್ದು ಸಾವಿರಾರು ಎಕರೆ ಕೃಷಿ ಭೂಮಿ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದೆ. ರೈತಾಪಿ ವರ್ಗ ಅಕ್ಷರಶಃ ಬೀದಿಗೆ ಬಂದಿದ್ದು ವಕ್ಪ್ ಕಾಯ್ದೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
1440 ರೈತರ ಕೃಷಿ ಭೂಮಿ ವಕ್ಫ್ ಬೋರ್ಡ್‌ಗೆ ವರ್ಗಾವಣೆಯಾಗಿದೆ. ಹಿಂದೆ ವಂಶಪಾರಂಪರಿಕವಾಗಿ ರೈತರು ಉಳುಮೆ ಮಾಡುತ್ತಿದ್ದರು. ಹಾಗೆ ಅವರ ವಂಶದವರ ಹೆಸರೇ ಪಹಣಿಯಲ್ಲಿ ಇತ್ತು. 2018 ರಲ್ಲಿ ಕೊಂಗಡಿ ಗ್ರಾಮದ ರೈತ ಸುನೀಲ್ ಹವಾಲ್ದಾರ್ ತನ್ನ ತಂದೆ ಅಂಬಣ್ಣನ ಹೆಸರಿನಿಂದ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಹಿಂದೆ ಪಹಣಿಯಲ್ಲಿ ಎಲ್ಲಿಯೂ ವಕ್ಫ್ ಎಂದು ಇರಲಿಲ್ಲ. ಕೆಲ ದಿನಗಳ ಬಳಿಕ ಕೊಂಗಡಿ ಗ್ರಾಮದ ಕೆಲ ಜಮೀನನ್ನು ರೈಲ್ವೆ ಇಲಾಖೆ ಹಳಿ ಕಾಮಗಾರಿಗಾಗಿ ಸ್ವಾಧೀನ ಪಡಿಸಿಕೊಂಡಿತು. ಆದರೆ, ರೈತರ ಪಹಣಿಯಲ್ಲಿನ 11 ನಂಬರ್ ಕಾಲಂನಲ್ಲಿ ವಕ್ಫ್ ಎಂದು ನಮೂದಾಗಿರುವುದು ವಿಚಾರ ಬೆಳಕಿಗೆ ಬಂದಿದೆ.
ರೈತರು ಜಮೀನಿನ ಹತ್ತಿರ ಯಾವುದೇ ದರ್ಗಾ, ಮಸೀದಿಗಳು ಇಲ್ಲದೇ ಇದ್ದರೂ ವಕ್ಫ್ ಬೋರ್ಡ್‌ಗೆ ವರ್ಗಾವಣೆಯಾಗಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಗ್ರಾಮದ ರೈತರೆಲ್ಲರೂ ಕೋರ್ಟ್ ಮೆಟ್ಟಿಲೇರಿದ್ದರಿಂದ ಸುಮಾರು 200 ಕೋಟಿ ರೂ.ಗೂ ಅಧಿಕ ಪರಿಹಾರ ರೈತರಿಗೆ ಸಿಗದೇ ಅಲ್ಲಿಯೇ ನಿಂತಿದೆ. ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಬೆಳೆ ಪರಿಹಾರ, ಬೆಳೆ ಸಾಲವೂ ಸಿಗದೇ ಅನ್ನದಾತರ ಬದುಕು ಅಕ್ಷರಶಃ ಬೀದಿಗೆ ಬಂದಿದ್ದಾರೆ.








