ಹಾವೇರಿ: ಸ್ಯಾಂಡಲ್‍ವುಡ್ ಸೇರಿದಂತೆ ಬೆಂಗಳೂರಿನಲ್ಲಿ ತಲೆ ಎತ್ತಿರುವ ಡ್ರಗ್ಸ್ ಹಾಗೂ ಗಾಂಜಾ ಜಾಲವನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಒಂದೇ ದಿನ ಸಿಸಿಬಿ ಪೊಲೀಸರು 200 ಕೆ.ಜಿ.ಗಾಂಜಾ ಸೀಜ್ ಮಾಡಿದ್ದಾರೆ. ಕೇಂದ್ರದ ಆಂಟಿ ನಾರ್ಕೋಟಿಕ್ಸ್ ಟೀಂ ಡ್ರಗ್ಸ್ ಸೀಜ್ ಮಾಡಿದೆ. ಈ ವೇಳೆ ಅವರಿಗೆ ಕೆಲವೊಂದು ಸುಳಿವು ಸಿಕ್ಕಿವೆ. ಯಾರೇ ಇರಲಿ, ಎಷ್ಟೇ ಇರಲಿ. ಡ್ರಗ್ಸ್ ಮಾರಾಟ, ಡ್ರಗ್ಸ್ ಸೇವನೆಯಂತಹ ಕಾನೂನು ಬಾಹಿರ ಕೆಲಸಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಡ್ರಜ್ಸ್ ಮಾಫಿಯಾದವರಿಗೆ ಜೈಲು ಶಿಕ್ಷೆ ಆಗೋದಕ್ಕೆ ಇರುವ ವಿಶೇಷ ಕಾನೂನಿನ ಅಡಿಯಲ್ಲಿ ಶಿಕ್ಷೆ ಕೊಡಿಸ್ತೇವೆ. ನಾವು ಹಿಡಿದ್ಮೇಲೆ ಅದು ದೊಡ್ಡ ಸುದ್ದಿಯಂತಲ್ಲ. ಹಲವಾರು ವರ್ಷದಿಂದ ಡ್ರಗ್ ಮಾಫಿಯಾಗೆ ಯಾವುದೇ ಕ್ರಮವನ್ನ ಸರಕಾರಗಳು ತೆಗೆದುಕೊಂಡಿರಲಿಲ್ಲ. ನಾನು ವಾರ್ ಆನ್ ಡ್ರಗ್ ಅಂತಾ ಡಿಕ್ಲೇರ್ ಮಾಡಿದ್ದೇನೆ. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಇಲ್ಲಿಗೆ ನಿಲ್ಲೋದಿಲ್ಲ ಬೊಮ್ಮಾಯಿ ಎಂದು ಭರವಸೆ ನೀಡಿದ್ದಾರೆ.
ಡ್ರಗ್ಸ್ ನಾನಾ ರೂಪದಲ್ಲಿ ಬರ್ತಾ ಇದೆ. ಚಾಕೊಲೇಟ್, ಸಣ್ಣ ಪೇಪರ್, ಟ್ಯಾಬ್ಲೆಟ್ ರೂಪದಲ್ಲಿ ಡ್ರಗ್ ಬರ್ತಿವೆ. ಎಲ್ಲವನ್ನೂ ನಿಯಂತ್ರಣ ಮಾಡೋ ರೂಪದಲ್ಲಿ ಬಲೆ ಬೀಸಿದ್ದೇವೆ. ವಿದೇಶಿಯರು ಇದ್ರಲ್ಲಿ ತೊಡಗಿದ್ದಾರೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಿ ಬೇರು ಸಮೇತ ಕಿತ್ತು ಒಗೆಯೋ ಕೆಲಸ ಮಾಡ್ತೇವೆ.
ಶಾಲಾ ಕಾಲೇಜುಗಳು ಆರಂಭವಾದ ಮೇಲೆ ಈ ಬಗ್ಗೆ ಜಾಗೃತಿ ಕಾರ್ಯ ಮಾಡಲಾಗುವುದು. ಯಾವ್ಯಾವ ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಗಳಲ್ಲಿ ಡ್ರಗ್ ಸಿಕ್ರೆ ಅಲ್ಲಿನ ಮ್ಯಾನೇಜ್ಮೆಂಟ್ ಹೊಣೆಗಾರಿಕೆ ಮಾಡ್ತೇವೆ ಎಂದು ಈಗಾಗಲೇ ಹೇಳಿದ್ದೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.