ಭಾರತದ ಇಂಗ್ಲೆಂಡ್ ಪ್ರವಾಸ – ವಾಷಿಂಗ್ಟನ್ ಸುಂದರ್ ಗೆ ಗಾಯ… ಕರ್ನಾಟಕದ ಕೆ. ಗೌತಮ್ ಗೆ ಸಿಗುತ್ತಾ ಚಾನ್ಸ್ ?
ಇಂಗ್ಲೆಂಡ್ ನಲ್ಲಿರುವ ಟೀಮ್ ಇಂಡಿಯಾಗೆ ಮತ್ತೊಂದು ಆಘಾತ. ಒಂದು ಕಡೆ ಕೊರೋನಾ ಆತಂಕ.. ಮತ್ತೊಂದು ಕಡೆ ಗಾಯದ ಸಮಸ್ಯೆ.. ಹೀಗೆ ಟೀಮ್ ಇಂಡಿಯಾ ಟೆಸ್ಟ್ ಸರಣಿಗೂ ಮುನ್ನ ಆಘಾತದ ಮೇಲೆ ಆಘಾತ ಅನುಭವಿಸುತ್ತಿದೆ.
ಈಗಾಗಲೇ ಶುಬ್ಮನ್ ಗಿಲ್ ಮತ್ತು ವೇಗಿ ಆವೇಶ್ ಖಾನ್ ಗಾಯದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ.
ಕೌಂಟಿ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ಎರಡನೇ ದಿನ ವಾಷಿಂಗ್ಟನ್ ಸುಂದರ್ ಅವರು ಮಹಮ್ಮದ್ ಸಿರಾಜ್ ಎಸೆತದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.
ವಾಷಿಂಗ್ಟನ್ ಸುಂದರ್ ಅವರ ಕೈ ಬೆರಳಿನ ಗಾಯ ಗಂಭೀರ ಸ್ವರೂಪದ್ದಾಗಿದೆ. ಬೌಲಿಂಗ್ ಮಾಡಲು ವಾಷಿಂಗ್ಟನ್ ಸುಂದರ್ ಗೆ ಸುಮಾರು ಐದು ವಾರಗಳು ಬೇಕಾಗಿವೆ. ಹೀಗಾಗಿ ಟೆಸ್ಟ್ ಸರಣಿಯಲ್ಲಿ ಆಡುವುದು ಅಸಾಧ್ಯವಾಗಿದೆ. ಆವೇಶ್ ಖಾನ್, ಶುಬ್ಮನ್ ಗಿಲ್ ನಂತೆ ವಾಷಿಂಗ್ಟನ್ ಸುಂದರ್ ಈಗ ಮನೆ ದಾರಿ ಹಿಡಿಯಬೇಕಾಗಿದೆ.
ಹೌದು, ವಾಷಿಂಗ್ಟನ್ ಸುಂದರ್ ಗಂಭೀರವಾಗಿ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಗಾಯ ವಾಸಿಯಾಗಿ ಬೌಲಿಂಗ್ ಮಾಡಲು ಐದು ವಾರಗಳು ಬೇಕಾಗಿವೆ. ಹೀಗಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ನೆಟ್ ಬೌಲರ್ ಆಗಿದ್ದ ವಾಷಿಂಗ್ಟನ್ ಸುಂದರ್ ಅನಿರೀಕ್ಷಿತವಾಗಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ ಗಮನ ಸೆಳೆಯುವಂತಹ ಆಟವನ್ನೂ ಆಡಿದ್ದರು. ಆಲ್ ರೌಂಡರ್ ಆಗಿರುವ ವಾಷಿಂಗ್ಟನ್ ಸುಂದರ್ ಜಾಗಕ್ಕೆ ಇದೀಗ ಕರ್ನಾಟಕ ಕೆ. ಗೌತಮ್ ಅವರಿಗೆ ಅದೃಷ್ಟ ಖುಲಾಯಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಇನ್ನೊಂದೆಡೆ ಆವೇಶ್ ಖಾನ್ ಬದಲು ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾದೊಳಗೆ ಪ್ರವೇಶಿಸುವ ಸಾಧ್ಯತೆ ಇದೆ. ಹಾಗೇ ನವದೀಪ್ ಸೈನಿಗೂ ಅವಕಾಶಗಳಿವೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಇಂಗ್ಲೆಂಡ್ ಸರಣಿಗೆ ಮುನ್ನ ಗಾಯದ ಸಮಸ್ಯೆ ಬೆಂಬಿಡದ ಭೂತದಂತೆ ಕಾಯುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 4ರಿಂದ ಆರಂಭವಾಗಲಿದೆ.