ಬೆಂಗಳೂರು ನಗರದಲ್ಲಿ ನೀರಿನ ದರವನ್ನು ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, 2014ರಿಂದ ಇಲ್ಲಿವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ ಕನಿಷ್ಠ 1 ಪೈಸೆ ಆದರೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಜಲಮಂಡಳಿ (BWSSB) 6-7 ಪೈಸೆ ಹೆಚ್ಚಳ ಮಾಡುವಂತೆ ಮನವಿ ಮಾಡಿತ್ತು. ಆದರೆ, ನಾನು 1 ಪೈಸೆ ಹೆಚ್ಚಳ ಮಾಡಲು ಮಾತ್ರ ಒಪ್ಪಿಗೆ ನೀಡಿದ್ದೇನೆ ಎಂದು ವಿವರಿಸಿದರು.
ನಗರದ ಜನತೆಗೆ ನೀರು ಸರಬರಾಜು ಮಾಡುವುದು ದೊಡ್ಡ ಸವಾಲಾಗಿದ್ದು, ನೀರಿನ ದರ ಸುಗಮವಾಗಿ ನಿರ್ವಹಿಸುವಂತೆ ಸರ್ಕಾರ ಯತ್ನಿಸುತ್ತಿದೆ. ಈ ನಿರ್ಧಾರದಿಂದ ಸಾರ್ವಜನಿಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಅಲ್ಲದೆ, ನೀರಿನ ಶೇಖರಣೆ, ವಿತರಣಾ ವ್ಯವಸ್ಥೆ ಸುಧಾರಣೆ ಮತ್ತು ಪೈಪುಲೈನ್ ನಿರ್ವಹಣೆಗೆ ಅಗತ್ಯವಿರುವ ವೆಚ್ಚವನ್ನು ಸಮರ್ಥವಾಗಿ ನಿರ್ವಹಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ನೀರಿನ ದರ ಹೆಚ್ಚಳ ಸಂಬಂಧ ಅಧಿಕೃತ ಆದೇಶಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.








