ಕೇರಳದ ವಯನಾಡಿನಲ್ಲಿ (Wayanad Landslides) ಸಂಭವಿಸಿದ ಭೂಕುಸಿತದಿಂದಾಗಿ ಸಾವಿರಾರು ಕುಟುಂಬಗಳು ಮನೆ, ಆಸ್ತಿ -ಪಾಸ್ತಿಗಳನ್ನು ಕಳೆದುಕೊಂಡು ಬೀದಿಗೆ ಬಂದಿವೆ. ಸತ್ತವರ ಸಂಖ್ಯೆ ಇಲ್ಲಿಯವರೆಗೆ 300ರ ಗಡಿ ದಾಟಿದೆ. ಹೀಗಾಗಿ ಸಂತ್ರಸ್ತರ ಸಹಾಯಕ್ಕಾಗಿ ಹಲವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದು, ಈಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೂಡ ಇದೇ ಹಾದಿಗೆ ಬಂದಿದ್ದಾರೆ.
ವಯನಾಡು ಭೂಕುಸಿತ ದುರಂತದಿಂದಾಗಿ ಸಂಕಷ್ಟದಲ್ಲಿರುವವರಿಗೆ ಈಗ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಸ್ವತಃ ನಟ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.
ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಕೇರಳದ ಜನರು ನನಗೆ ಯಾವಾಗಲೂ ತುಂಬಾ ಪ್ರೀತಿ ತೋರಿಸಿದ್ದಾರೆ. ಹೀಗಾಗಿ ಈ ಸಮಯದಲ್ಲಿ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಲು ಬಯಸುತ್ತೇನೆ. ನಿಮ್ಮೆಲ್ಲರ ಸುರಕ್ಷತೆ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಲ್ಲು ಅರ್ಜುನ್ ಅವರ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ. ವಯನಾಡು ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ಈಗಾಗಲೇ ರಶ್ಮಿಕಾ ಮಂದಣ್ಣ (Rashmika Mandanna), ಸೂರ್ಯ ದಂಪತಿ, ಮಮ್ಮುಟ್ಟಿ, ಚಿಯಾನ್ ವಿಕ್ರಮ್, ದುಲ್ಕರ್ ಸಲ್ಮಾನ್ ಸೇರಿದಂತೆ ಅನೇಕರು ಕೇರಳದ ಸಿಎಂ ಫಂಡ್‌ಗೆ ಲಕ್ಷ ಲಕ್ಷ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.