ಬೆಂಗಳೂರು: ಕೋಮುವಾದಿ ಶಕ್ತಿ ಹತ್ತಿಕ್ಕಲು ನಾವು ಸದಾ ಸನ್ನದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಧಿಕೃತ ನಿವಾಸ ಕಾವೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ಸಂವಿಧಾನ ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು. ಅಲ್ಲದೇ, ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2024ರ ಜನವರಿ 26ಕ್ಕೆ 75 ವರ್ಷಗಳು ಕಳೆಯುತ್ತಿವೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ, ಎಲ್ಲರ ನಡುವೆ ಭ್ರಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.