ರಾಜ್ಯದಲ್ಲಿ ಜಾತಿಗಣತಿ ವರದಿ ಕುರಿತ ಚರ್ಚೆಗಳು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಕೂಡ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, “ನಾವು 75 ಲಕ್ಷ ಇಲ್ಲ, ನಮ್ಮ ಜನಸಂಖ್ಯೆ 1 ಕೋಟಿ ಮೀರುತ್ತದೆ. ಸಮೀಕ್ಷೆ ಮಾಡಿದ್ದು ಸರ್ಕಾರವೇ. ವರದಿ ಸಿದ್ಧಪಡಿಸಿದ್ದಾರೆ. ಆಗ ವಿಳಂಬವೇಕೆ? ವಿರೋಧ ಮಾಡ್ತಿದ್ದಾರೆ ಅನ್ನೋದು ನನಗೆ ಅರ್ಥವಾಗುತ್ತಿಲ್ಲ,” ಎಂದು ಪ್ರಶ್ನಿಸಿದರು.
“ನಾವು 75 ಲಕ್ಷ ಜನರು ಇದ್ದರೂ ಕೇವಲ 7 ಶಾಸಕರಿದ್ದೇವೆ. ಇದು ಏನು ನ್ಯಾಯ? ಜಾತಿ ಆಧಾರದ ಮೇಲೆ ಸಂಸತ್ ಸ್ಥಾನ ನೀಡುತ್ತಿದ್ರೆ ವಿರೋಧ ಮಾಡಲಿ. ಬಿಜೆಪಿ ನಾಯಕರು ನಮ್ಮನ್ನು ಸೌತೆಕಾಯಿ ಮಾರುವವರು ಎನ್ನುತ್ತಾರೆ. ಆದರೆ ನಾವು ಈ ರಾಜ್ಯದ ಸಮಾನಭಾಗಿಯಾಗಿದ್ದೇವೆ,” ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದರು.
ಇಬ್ರಾಹಿಂ ಹೇಳುವಂತೆ, “ಈ ವರದಿ ನಮಗೆ ಸಂತೋಷವೂ ಅಲ್ಲ, ದುಃಖವೂ ಅಲ್ಲ. ಯಾರೋ ಅಂಗಡಿ ತೆರೆದಿದ್ದಾರೆ, ಓಕೆ. ಒಳ್ಳೆಯದಾಗಲಿ. ಯಾರೂ ಆತಂಕಪಡುವ ಅಗತ್ಯವಿಲ್ಲ,” ಎಂದು ಅವರು ಶಾಂತಿಯ ಸಂದೇಶ ನೀಡಿದರು.
“ಈಗ ಕುಮಾರಸ್ವಾಮಿಗೆ ಒಬ್ಬ ಮಗ ಇದ್ದಾನೆ. ನನಗೆ ಒಂಬತ್ತು ಮಕ್ಕಳಿದ್ದಾರೆ. ನಾನು ಒಬ್ಬ ಮಗ ಅಂತ ಹೇಳೋಕೆ ಆಗುತ್ತಾ? ಜನಸಂಖ್ಯೆ ಬಗ್ಗೆ ತಪ್ಪು ಚಿತ್ರಣ ನೀಡಬಾರದು,” ಎಂದು ಅವರು ವ್ಯಂಗ್ಯವಾಡಿದರು.








