ಬೆಂಗಳೂರು ; ಕೊರೊನಾ ಹೋರಾಟದಲ್ಲಿ ಸರ್ಕಾರ ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳಿಗೆ ನಮ್ಮ ಬೆಂಬಲವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಸಾವಿರ ಮಂದಿಗೆ ತಲಾ 10 ಕೆಜಿ ಅಕ್ಕಿ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ನಾವು ಬದ್ಧ. ನಾವು ಕೂಡ ಅನೇಕ ಸಲಹೆಗಳನ್ನು ನೀಡಿದ್ದೇವೆ. ಅವುಗಳಲ್ಲಿ ಎಷ್ಟನ್ನು ಸ್ವೀಕಾರ ಮಾಡುತ್ತಾರೋ ಬಿಡುತ್ತಾರೋ ಅದು ಸರ್ಕಾರಕ್ಕೆ ಬಿಟ್ಟಿದ್ದು. ರಾಜ್ಯದ ಜನರ ಆರೋಗ್ಯ, ಎಲ್ಲಾ ವರ್ಗದ ಜನರ ರಕ್ಷಣೆ, ಪಾರದರ್ಶಕತೆ ಕಾಪಾಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಯಲ್ಲಿ ಇರುತ್ತೇವೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ, ಈಗಲೂ ಅದಕ್ಕೆ ಬದ್ಧರಿದ್ದೇವೆ ಎಂದರು.
ಇದೇ ವೇಳೆ ಪಾದರಾಯನಪುರ ಘಟನೆ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಿನ್ನೆ ಪಾದರಾಯನಪುರ ಘಟನೆಯಲ್ಲೂ ನಾವು ಸರ್ಕಾರದ ಜೊತೆಯಲ್ಲಿ ನಿಂತಿದ್ದೇವೆ. ಬಿಜೆಪಿಯವರು ಪ್ರತಿ ಘಟನೆಗೂ ಜಾತಿ, ಧರ್ಮದ ಲೇಪ ಹಚ್ಚುತ್ತಿದ್ದಾರೆ. ಯಾರೋ ನೂರೈವತ್ತು ಜನ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನೇ ಹೊಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೆ ವಿಶ್ವಕ್ಕೆ ಕೊರೊನಾ ಕಾಡುತ್ತಿದೆ. ಮೇ 3ರವರೆಗಿನ ಲಾಕ್ ಡೌನ್ ಗೆ ನಾವು ಸಹಕಾರ ನೀಡುತ್ತೇವೆ, ರೈತರ, ಕೂಲಿ ಕಾರ್ಮಿಕರ, ಕಾರ್ಮಿಕರ ದಿನ ನಿತ್ಯದ ವಸ್ತುಗಳ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.








