ಬೆಂಗಳೂರು : ಡಿ.ಕೆ.ಶಿವಕುಮಾರ್ ತುಂಬಾ ಸ್ಮಾರ್ಟ್, ಆದರೆ ಓವರ್ ಸ್ಮಾರ್ಟ್ ಆಗಬಾರದು, ಡಿಕೆಶಿ ಮಾತಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂದು ಸಚಿವ ಆರ್. ಅಶೋಕ್ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ದೇಶ ಒಟ್ಟಾಗಿ ನಿಂತಿದೆ, ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿದೆ. ದೇಶದ ಕಾನೂನು ಪ್ರಕಾರ ಪ್ರತಿಯೊಂದು ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ವಿಧಾನಸಭೆ ಅಧಿವೇಶನ ನಡೆಸುವುದರ ಬಗ್ಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಕೊರೋನಾ ನಿಯಂತ್ರಿಸಲು ಮೊದಲು ಆದ್ಯತೆ ನೀಡಲಾಗುತ್ತಿದೆ. ಶಿವಕುಮಾರ್ ಅವರು ಹೊಸದಾಗಿ ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ. ಅವರಿಗೆ ಬಹಳಷ್ಟು ಆಸೆಗಳಿವೆ, ಹೊಸದಾಗಿ ಮದುವೆಯಾದವರಿಗೆ ಎಲ್ಲೆಲ್ಲಾ ಹೋಗಬೇಕು ಎಂಬ ಆಸೆ ಇರುತ್ತದೆ. ಅದೇ ರೀತಿ ಶಿವಕುಮಾರ್ ಅವರಿಗೂ ಆಸೆಗಳಿವೆ. ಡಿ.ಕೆ.ಶಿವಕುಮಾರ್ ತುಂಬಾ ಸ್ಮಾರ್ಟ್, ಆದರೆ ಓವರ್ ಸ್ಮಾರ್ಟ್ ಆಗಬಾರದು, ಡಿಕೆಶಿ ಮಾತಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ಅವರಿಂದ ಬಲಿಷ್ಠರಾಗಿರುವ ಯಡಿಯೂರಪ್ಪ ಇದ್ದಾರೆ. ಹಣ ಕೊಡಬೇಕು ಎಂದು ಇದ್ದರೆ ಅವರು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೆ ಇಪ್ಪತ್ತು ಸಾವಿರ ನೀಡಲಿ, ಜನರಿಗೆ ಸಹಾಯ ಆಗುತ್ತದೆ. ಆದರೆ ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಅಕ್ಕ – ಪಕ್ಕದಲ್ಲಿ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಇದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಅಶೋಕ್ ಟಾಂಗ್ ನೀಡಿದರು.
ಡಿಕೆಶಿ ನೀಡಿದ ಚೆಕ್ ನಲ್ಲಿ ಡಿ ಕೆ ಶಿವಕುಮಾರ್ ಅವರ ಸಹಿ ಇಲ್ಲ, ಅದರಲ್ಲಿ ದಿನೇಶ್ ಗುಂಡೂರಾವ್ ಅವರ ಸಹಿ ಇದೆ. ಇನ್ನೂ ಅವರಿಗೆ ಸಹಿ ಹಾಕುವ ಅಧಿಕಾರ ಸಿಕ್ಕಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದರು.








