ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೇಳಿದ್ದೇವೆ : ರೇಣುಕಾಚಾರ್ಯ
ಬೆಂಗಳೂರು : ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೇಳಿದ್ದೇವೆ. ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಎಂದು ಅರುಣ್ ಸಿಂಗ್, ಸಿಎಂ ಅವರನ್ನು ಕೇಳಿಕೊಂಡಿದ್ದೇವೆ. ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ರೇಣುಕಾಚಾರ್ಯ ಇಂದು ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದರು. ಬಳಿಕ ಮಾನತಾಡಿದ ಅವರು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ರೆ ತಪ್ಪೇನಿಲ್ಲ. ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೇಳಿದ್ದೇವೆ. ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಎಂದು ಅರುಣ್ ಸಿಂಗ್, ಸಿಎಂ ಅವರನ್ನು ಕೇಳಿಕೊಂಡಿದ್ದೇವೆ. ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ ಎಂದು ಬೇಡಿಕೆ ಸಮರ್ಥಿಸಿಕೊಂಡರು.
ಇದೇ ವೇಳೆ ಖಾತೆ ವಿಚಾರವಾಗಿ ಮಾತನಾಡಿ, ಯಾವ ಖಾತೆ ಕೊಟ್ಟರೂ ಸಹ ಸಮರ್ಥವಾಗಿ ನಿಭಾಯಿಸುತ್ತೇನೆ, ಆದರೆ ಕೂಸು ಹುಟ್ಟುವುದಕ್ಕೆ ಮುನ್ನಾ ಕುಲಾವಿ ಹೊಲಿಸಿದ್ರು ಎನ್ನುವಂತೆ ಈಗಲೇ ಏನೂ ಹೇಳುವುದಿಲ್ಲ. ಯಾವ ಖಾತೆ ಬೇಕು ಎಂದು ನಾನು ಕೇಳುವುದಿಲ್ಲ, ಸಂಪುಟ ರಚನೆಯಾದ ಬಳಿಕ ಈ ಕುರಿತು ನೋಡೋಣ ಎಂದರು.
ಇನ್ನು ಬೊಮ್ಮಾಯಿ ಸಂಪುಟದಲ್ಲಿಲ ಇರಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ಬಗ್ಗೆ ಮಾತನಾಡಿ, ಜಗದೀಶ್ ಶೆಟ್ಟರ್ ಹಿರಿಯರು, ಅವರು ತ್ಯಾಗ ಮಾಡಲಿ ಅಂತ ಹೇಗೆ ಹೇಳಲಿ..? ಅವರು ಮುಖ್ಯಮಂತ್ರಿ ಆಗಿದ್ದವರು. ಪ್ರತಿಪಕ್ಷ ನಾಯಕರಾಗಿದ್ದವರು, ಸ್ಪೀಕರ್ ಆಗಿದ್ದವರು ಅವರ ನಿರ್ಧಾರದ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ. ಉಳಿದವರು ಅದೇ ನಿರ್ಧಾರ ತೆಗೆದುಕೊಳ್ಳುತ್ತಾರ ಅಂತ ಗೊತ್ತಿಲ್ಲ. ಮಾಧ್ಯಮದವರು ನನ್ನನ್ನು ಮಾತಿನಲ್ಲಿ ಕಟ್ಟಿಹಾಕಬೇಡಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.