ತಲಕಾವೇರಿಯ ಬ್ರಹ್ಮ ಗಿರಿ ಬೆಟ್ಟ ಕುಸಿದಿರುವುದು ಆಘಾತವನ್ನುಂಟು ಮಾಡಿದೆ – ಸಚಿವ ವಿ. ಸೋಮಣ್ಣ
ತಲಕಾವೇರಿಯ ಬ್ರಹ್ಮ ಗಿರಿ ಬೆಟ್ಟ ಕುಸಿದಿರುವುದು ನೋವಿನ ಸಂಗತಿ. ಹಿಂದಿನ ಕಹಿ ಘಟನೆ ಮರುಕಳಿಸಬಾರದು ಎಂದು ಮೊದಲೇ ಎನ್‍ಡಿಆರ್‍ಎಫ್ ಪಡೆಯನ್ನು ಕರೆಸಿದ್ದೇವೆ. ನಾಳೆ ಬ್ರಹ್ಮ ಗಿರಿ ಬೆಟ್ಟಕ್ಕೆ ಹೋಗುತ್ತೇನೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕರು ಸೇರಿದಂತೆ ಐದು ಮಂದಿ ನಾಪತ್ತೆಯಾಗಿದ್ದಾರೆ. ಪ್ರಧಾನ ಅರ್ಚಕರು ಅಧಿಕಾರಿಗಳಾದ ಪಿಡಿಓ ಮತ್ತು ಪೊಲೀಸರ ಮಾತನ್ನು ಕೇಳುತ್ತಿದ್ರೆ ಈ ದುರಂತವನ್ನು ತಪ್ಪಿಸಬಹುದಿತ್ತು. ಆದ್ರೆ ಈ ರೀತಿ ಆಗಬಾರದಿತ್ತು. ತುಂಬಾನೇ ಆಘಾತವನ್ನುಂಟು ಮಾಡಿದೆ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ.
ಈಗಾಗಲೇ ಸುಮಾರು 20 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಪೂರ್ಣ ಮುಳುಗಡೆಯಾಗಿದೆ. ವ್ಯವಸ್ಥಿತ ರೀತಿಯಲ್ಲಿ ಪರಿಹಾರದ ಕೆಲಸ ನಡೆಯುತ್ತಿದೆ. ಹಾಗೇ ವಿರಾಜಪಪೇಟೆಯ ಚಿಕ್ಕಪೇಟೆಯಲ್ಲಿ ಮತ್ತೊಂದು ಕಾಳಜಿ ಕೇಂದ್ರವನ್ನು ಮೀಸಲಿರಿಸಲಾಗಿದೆ. ಇನ್ನೊಂದೆಡೆ ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಬಿರುಕು ಬಿಟ್ಟಿರುವುದರಿಂದ ಅಲ್ಲಿದ್ದವರನ್ನು ಕೂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಅಯ್ಯಪ್ಪ ಬೆಟ್ಟಕ್ಕೂ ನಾನು
ನಾಳೆ ಭೇಟಿ ನೀಡಿ ಅಲ್ಲಿನ ಜನರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.
ಕಳೆದ ಮೂರು ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಎನ್‍ಡಿಆರ್‍ಎಫ್ ನಿಂದ 23 ಜನ ಈಗಾಗಲೇ ಇದ್ದಾರೆ. ಹಾಗೇ ಬೆಂಗಳೂರು ಮತ್ತು ಮೈಸೂರಿನಿಂದ 20 ಜನರ ತಂಡವೂ ಬರಲಿದೆ. ಕಾಳಜಿ ಕೇಂದ್ರಕ್ಕೆ ಬರುವ ಮುನ್ನ ರ್ಯಾಪಿಡ್ ಕೋವಿಡ್ ಟೆಸ್ಟ್ ಮಾಡಲಿದ್ದೇವೆ. ನೆಗೆಟಿವ್ ಬಂದವರನ್ನು ಕಾಳಜಿ ಕೇಂದ್ರಕ್ಕೆ ಸೇರಿಸಿಕೊಳ್ಳುತ್ತೇವೆ. ಪಾಸಿಟಿವ್ ಬಂದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಈಗಾಗಲೇ ಸಿಎಂ ಮತ್ತು ಕಂದಾಯ ಸಚಿವರ ಜೊತೆಗೆ ಚರ್ಚೆ ಕೂಡ ನಡೆಸಿದ್ದೇನೆ ಎಂದು ಅವರು ತಿಳಿಸಿದ್ರು.








