ಬೆಂಗಳೂರು : ರಾಜ್ಯಸಭೆ ಚುನಾವಣೆ ಟಿಕೆಟ್ ಹಂಚಿಕೆ ವಿಚಾರವಾಗಿ ನಮ್ಮ ಪಕ್ಷದಲ್ಲಿ ಭಿನ್ನಮತ, ಭಿನ್ನಾಭಿಪ್ರಾಯವಿಲ್ಲ, ಕೇವಲ ಅಭಿಪ್ರಾಯಗಳಿವೆ ಅಷ್ಟೇ ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಯಾವುದೇ ಭಿನ್ನಮತ, ಭಿನ್ನಾಭಿಪ್ರಾಯವಿಲ್ಲ, ಕೇವಲ ಅಭಿಪ್ರಾಯಗಳಿವೆ ಅಷ್ಟೇ. ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕೋರ್ ಕಮಿಟಿ ಸದಸ್ಯರಿಗೆ ಬಿಟ್ಟಿದ್ದು. ಅಂತಿಮ ತೀರ್ಮಾನಗಳನ್ನು ಅವರೆಲ್ಲರೂ ಸೇರಿ ಕೈಗೊಳ್ಳಲಿದ್ದಾರೆ ಎಂದರು.
ಟಿಕೆಟ್ ನೀಡುವ ವಿಚಾರವಾಗಿ ಇಬ್ಬರನ್ನು ಆಯ್ಕೆ ಮಾಡುವ ಸಂಬಂಧ ಇವತ್ತು ತೀರ್ಮಾನ ಮಾಡಲಾಗುತ್ತದೆ. ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಆದರೆ, ಒಬ್ಬರನ್ನು ಮಾತ್ರ ಆಯ್ಕೆ ಮಾಡಬೇಕಾಗಿದೆ. ಉಳಿದವರಿಗೆ ಬೇರೆ ಅವಕಾಶ ಕಲ್ಪಿಸಲಾಗುವುದು. ಸಮಾಧಾನ ಪಡಿಸುವ ಕೆಲಸವನ್ನು ನಾಯಕರು ಮಾಡಲಿದ್ದಾರೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ರಾಮುಲು ಸ್ಪಷ್ಟಪಡಿಸಿದರು.
ಇದೇ ವೇಳೆ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ದುಬಾರಿ ಹಣ ವಸೂಲಿ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ನಮ್ಮ ಸರ್ಕಾರಿ ಆಸ್ಪತ್ರೆಗಳು ಖಾಲಿ ಇವೆ. ಅವು ಭರ್ತಿಯಾದರೆ ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ಸಹಕಾರ ಪಡೆಯುತ್ತೇವೆ. ಆದರೆ, ಕೆಲವರು ನಮಗೆ ತಿಳಿಯದ ಹಾಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ಸಂದರ್ಭ ಖಾಸಗಿ ಆಸ್ಪತ್ರೆಗಳು ಎಷ್ಟು ಶುಲ್ಕ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಎರಡು-ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಖಾಸಗಿ ಆಸ್ಪತ್ರಗೆಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ ಎಂಬ ಸಣ್ಣ ದೂರು ಬಂದರೂ ಸಹ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕೊರೊನಾ ಹೆಸರಿನಲ್ಲಿ ಖಾಸಗಿ ನರ್ಸಿಂಗ್ ಹೋಂಗಳು ದಂಧೆ ಮಾಡುವುದಕ್ಕೆ ಸರ್ಕಾರ ಬಿಡುವುದಿಲ್ಲ ಎಂದು ರಾಮುಲು ವಾರ್ನಿಂಗ್ ನೀಡಿದರು.