ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು, ಅದರಲ್ಲೂ ಮುಖ್ಯವಾಗಿ ಸಚಿವ ಜಮೀರ್ ಅಹಮದ್ ಖಾನ್ ಮತ್ತೆ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಸ್ಪಷ್ಟನೆಯನ್ನು ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಸದ್ಯ ನನ್ನ ಸಂಪರ್ಕದಲ್ಲಿ ಇಲ್ಲ. ಹೀಗಿರುವಾಗ ಅವರು ನಮ್ಮ ಪಕ್ಷ ಸೇರುವ ಮಾತು ಎಲ್ಲಿಂದ ಬರುತ್ತದೆ? ಇದೆಲ್ಲವೂ ಕೇವಲ ಗಾಳಿಸುದ್ದಿ ಮತ್ತು ಸೃಷ್ಟಿತ ಕಥೆಗಳಷ್ಟೇ ಎಂದು ಗಂಭೀರವಾಗಿ ಪ್ರತಿಕ್ರಿಯಿಸಿದರು.
ನಮ್ಮ ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಯಾರಿಗೆ ಆದ್ಯತೆ ನೀಡಬೇಕು ಎಂಬ ಅಂತಿಮ ನಿರ್ಧಾರವನ್ನು ನಾನೇ ತೆಗೆದುಕೊಳ್ಳಬೇಕು. ಪಕ್ಷದ ಚೌಕಟ್ಟಿನಲ್ಲಿ ಇಂತಹ ಚರ್ಚೆಗಳೇ ನಡೆದಿಲ್ಲ. ನನ್ನ ಸಂಪರ್ಕಕ್ಕೇ ಯಾರೂ ಬಾರದ ಮೇಲೆ ಪಕ್ಷ ಸೇರ್ಪಡೆಯ ವಿಚಾರವೇ ಅಪ್ರಸ್ತುತ. ನಾವು ಈ ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ. ಕಳೆದ ಕಾಲದ ಕಹಿ ಘಟನೆಗಳಿಂದ ಪಾಠ ಕಲಿತಿದ್ದೇವೆ ಎಂದು ಕುಮಾರಸ್ವಾಮಿ ಎಚ್ಚರಿಕೆಯ ದಾಟಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಅಲ್ಪಸಂಖ್ಯಾತ ರಾಜಕಾರಣವನ್ನು ತೀವ್ರವಾಗಿ ಟೀಕಿಸಿದ ಅವರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಫಲಿತಾಂಶ ಏನಾಗುತ್ತದೆ ಎಂದು ಕಾದು ನೋಡೋಣ. ಅಲ್ಪಸಂಖ್ಯಾತರ ರಕ್ಷಕರು ಎಂದು ಬೀಗುವ ಕಾಂಗ್ರೆಸ್ ಇಂದು ಒಂದು ನಿರ್ದಿಷ್ಟ ಸಮುದಾಯದ ಮೇಲೆ ಏಕಪಕ್ಷೀಯವಾಗಿ ಗದಾಪ್ರಹಾರ ನಡೆಸುತ್ತಿದೆ. ಅವರ ನಡೆಗಳು ಆ ಸಮುದಾಯದಲ್ಲಿ ತೀವ್ರ ಗೊಂದಲ ಸೃಷ್ಟಿಸುತ್ತಿವೆ ಎಂದು ಕಿಡಿಕಾರಿದರು.
ಮತ್ತೊಂದು ಪಕ್ಷದಲ್ಲಿ ಉಂಟಾಗಿರುವ ಆಂತರಿಕ ರಾಜಕೀಯ ಬಿಕ್ಕಟ್ಟುಗಳನ್ನು ಅಥವಾ ಅಲ್ಲಿನ ನಾಯಕರ ಅಸಮಾಧಾನಗಳನ್ನು ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ಕೆಟ್ಟ ಮನಸ್ಥಿತಿ ನಮ್ಮದಲ್ಲ. ಜೆಡಿಎಸ್ ತನ್ನದೇ ಆದ ಸಂಘಟನಾ ಶಕ್ತಿಯ ಮೇಲೆ ಮುನ್ನಡೆಯಲಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಮತ್ತು ರಾಜಕೀಯ ವಲಯದ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.








