ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಟಿವಿ ಚರ್ಚೆಯೊಂದರಲ್ಲಿ ನೇರ ಜೀವ ಬೆದರಿಕೆ ಹಾಕಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೇರಳದ ಬಿಜೆಪಿ ವಕ್ತಾರ ಪಿಂಟು ಮಹಾದೇವ್, ಮಲಯಾಳಂ ಸುದ್ದಿ ವಾಹಿನಿಯೊಂದರ ನೇರ ಪ್ರಸಾರ ಚರ್ಚೆಯಲ್ಲಿ, “ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ, ಹುಷಾರ್!” ಎಂದು ಹೇಳಿರುವುದು ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಶುಕ್ರವಾರ, ಸೆಪ್ಟೆಂಬರ್ 26, 2025 ರಂದು ನಡೆದ ಮಲಯಾಳಂ ಸುದ್ದಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಪಿಂಟು ಮಹಾದೇವ್, ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ನಾಯಕತ್ವದಿಂದಾಗಿ ಭಾರತದಲ್ಲಿ ಅಂತಹ ಪ್ರತಿಭಟನೆಗಳು ಸಾಧ್ಯವಿಲ್ಲ ಎಂದು ವಾದಿಸಿದರು.
ಚರ್ಚೆಯ ಸಂಧರ್ಭದಲ್ಲಿ, ಒಂದು ವೇಳೆ ರಾಹುಲ್ ಗಾಂಧಿ ಅಂತಹ ಪ್ರಯತ್ನಗಳಿಗೆ ಕೈ ಹಾಕಿದರೆ “ಅವರ ಎದೆಗೆ ಗುಂಡುಗಳು ತೂರಿಹೋಗಲಿವೆ” ಎಂದು ಆಕ್ರೋಶಭರಿತ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಮೂಲಕ ಬಗೆಹರಿಸಿಕೊಳ್ಳುವ ಪ್ರವೃತ್ತಿಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ತೀವ್ರ ಆಕ್ರೋಶ, ಗೃಹ ಸಚಿವರಿಗೆ ಪತ್ರ
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, “ಇದು ಕೇವಲ ಒಬ್ಬ ವ್ಯಕ್ತಿಯ ಆಕಸ್ಮಿಕ ಹೇಳಿಕೆಯಲ್ಲ, ಬದಲಾಗಿ ವಿರೋಧ ಪಕ್ಷದ ನಾಯಕರ ವಿರುದ್ಧ ವ್ಯವಸ್ಥಿತವಾಗಿ ರೂಪಿಸಲಾಗುತ್ತಿರುವ ಸಂಚಿನ ಭಾಗ” ಎಂದು ಆರೋಪಿಸಿದ್ದಾರೆ.
“ರಾಹುಲ್ ಗಾಂಧಿಯವರ ಜೀವಕ್ಕೆ ಅಪಾಯವಿದೆ. ಈ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಬಾರದು. ತಕ್ಷಣವೇ ಪಿಂಟು ಮಹಾದೇವ್ ಅವರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ, ಬಿಜೆಪಿ ನಾಯಕತ್ವ ಈ ಹೇಳಿಕೆಯನ್ನು ಸಾರ್ವಜನಿಕವಾಗಿ ಖಂಡಿಸಿ, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇರಳದಲ್ಲಿ ಎಫ್‌ಐಆರ್ ದಾಖಲು, ಪ್ರತಿಭಟನೆ
ಈ ನಡುವೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯದರ್ಶಿ ನೀಡಿದ ದೂರಿನನ್ವಯ, ತ್ರಿಶೂರ್‌ನ ಪೆರಮಂಗಲಂ ಪೊಲೀಸರು ಬಿಜೆಪಿ ವಕ್ತಾರ ಪಿಂಟು ಮಹಾದೇವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಗಲಭೆಗೆ ಪ್ರಚೋದನೆ, ಶಾಂತಿ ಕದಡುವ ಉದ್ದೇಶದಿಂದ ಅವಮಾನಿಸುವುದು ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.
ಈ ಘಟನೆಯನ್ನು ಖಂಡಿಸಿ ಕೇರಳದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಯ ತಕ್ಷಣದ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ.
ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ
ಈ ಘಟನೆಯು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಸಂವಾದಗಳ ಮಟ್ಟವು ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಡಳಿತಾರೂಢ ಪಕ್ಷದ ವಕ್ತಾರರೊಬ್ಬರು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕನಿಗೆ ಈ ರೀತಿ ಬಹಿರಂಗವಾಗಿ ಜೀವ ಬೆದರಿಕೆ ಹಾಕಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ ಎಂದು ಹಲವು ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಈ ಪ್ರಕರಣವು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಮತ್ತು ರಾಜಕೀಯ ನಾಯಕರ ಭಾಷಾ ಬಳಕೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.







