ದಾವಣಗೇರೆ : ಪರಮೇಶ್ವರ್ ನಾಯ್ಕ ಅವರ ಮಗನ ಮದುವೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಮ್ಮ ಪುತ್ರನ ಅದ್ಧೂರಿ ಮದುವೆ ಸಮಾರಂಭಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಹಾಡಲಾಗಿದೆ. ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡದಲ್ಲಿ ನಡೆದ ಪಿಟಿಪಿ ಪುತ್ರನ ಮದುವೆ ಇದೀಗ ಟೀಕೆಗೂ ಗುರಿಯಾಗಿದೆ. ಈ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಿ.ಟಿ ಪರಮೇಶ್ವರ ನಾಯ್ಕ ಮಗನ ಮದುವೆಯಲ್ಲಿ ನಿಯಮ ಉಲ್ಲಂಘನೆ ಆಗಿದೆಯೇ ಇಲ್ಲವೋ ಎಂದು ಜಿಲ್ಲಾಧಿಕಾರಿ ಅಥಾವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಲ್ಲಂಘನೆ ಆಗಿದೆಯೋ ಇಲ್ಲವೋ ಎಂದು ನೋಡಿಕೊಳ್ಳತ್ತಾರೆ. ಒಂದು ವೇಳೆ ನಿಯಮ ಉಲ್ಲಂಘನೆ ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲದೆ ಪರಮೇಶ್ವರ ನಾಯ್ಕರು ನನಗೂ ಸ್ನೇಹಿತರು. ಮಗನ ಮದುವೆ ಮಾಡಲು ಅವರಿಗೆ ಸ್ವಾತಂತ್ಯವಿದೆ. ಕೊರೊನಾ ಸೋಂಕು ತಗುಲಬಾರದು ಎಂದು ನಿಯಮಗಳನ್ನು ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಇದೆ ವೇಳೆ ಔರದ್ಕರ್ ವರದಿ ಬಗ್ಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾಗಿ ಔರದ್ಕರ್ ವರದಿ ಜಾರಿ ಮಾಡಲಾಗಿದೆ. ಆ ಮೂಲಕ ಪೊಲೀಸರ ಮೂಲವೇತನ ಹೆಚ್ಚಿಸಲಾಗಿದೆ ಎಂದು ಹೇಳಿದರು.








