ನಾದಬ್ರಹ್ಮ ಎಂದೆನಿಸಕೊಂಡು, ನಾದವನ್ನೇ ಬ್ರಹ್ಮನನ್ನಾಗಿ ಕಂಡ ತ್ಯಾಗರಾಜರ ಕೃತಿಗಳೆಂಬ ಸಾಮಗ್ರಿಗಳಿಗೆ, ನೃತ್ಯವನ್ನೇ ಉಸಿರಾಗಿಸಿಕೊಂಡಿರುವ ವ್ಯಕ್ತಿ, ನೃತ್ಯ ಸಂಯೋಜಿಸಿ ತನ್ನ ಶಿಷ್ಯಗಣದೊಂದಿಗೆ ಅದನ್ನು ರಸಿಕ ಲೋಕಕ್ಕೆ ಉಣಬಡಿಸಿದರೆ ಹುಟ್ಟಬಹುದಾದ ರೋಮಾಂಚನವನ್ನನುಭವಿಸಲು ತ್ಯಾಗರಾಜ ಹೃತ್ಸದನ ಕಾರ್ಯಕ್ರಮಕ್ಕೆ ಹಾಜರಾಗಲೇಬೇಕು.
ಹಾಗೇ ಕಾರ್ಯಕ್ರಮಕ್ಕೆ ಬರುವುದಕ್ಕೂ ಮುನ್ನ ಈ ಮಾಹಿತಿಯನ್ನು ಓದಿಕೊಂಡೇ ಬನ್ನಿ..
ಶ್ರೀರಾಮನ ಪರಮಭಕ್ತರಾದ ತ್ಯಾಗರಾಜರಿಗೆ ತನ್ನ ಸ್ವಾಮಿಯನ್ನು ಎಷ್ಟು ಬಣ್ಣಿಸಿದರೂ ಇನ್ನೂ ಏನೋ ಕಡಿಮೆ ಎಂಬ ಭಾವ ಮತ್ತು ಶ್ರೀರಾಮನಿಗೋ ತ್ಯಾಗರಾಜರು ಎಷ್ಟು ಬಗೆಬಗೆಯಾಗಿ ಹಾಡಿ ಓಲೈಸಿದರೂ ಇನ್ನಷ್ಟು ಬೇಕು ಎಂಬ ಭಾವ ಇದ್ದಿರಬಹುದೇನೋ…!!
ಇದು ತ್ಯಾಗರಾಜರ ಕೃತಿಗಳನ್ನು ಕೇಳಿದವರಿಗೆ ತೀರಾ ಮೇಲಿಂದ ಮೇಲೆ ಅನುಭವಕ್ಕೆ ಬರುವ ಅಂಶ… ಆಲಿಸುತ್ತಾ ಹೋದಂತೆ ಶ್ರೋತೃವಿನಅಂತರಾಳದ ಒಳಗಿಳಿದು ಭಾವಲೀನಗೊಳಿಸುವ ಅನುಭಾವ..
ಹೀಗೆ ಗಾನಲೋಲರನ್ನಾಗಿಸಬಲ್ಲ ತ್ಯಾಗರಾಜರು ಸುಮಾರು ಏಳುನೂರು ಕೃತಿಗಳನ್ನು ರಚಿಸಿದ್ದಾರೆಂದು ತಿಳಿದುಬರುತ್ತದೆ. ತ್ಯಾಗರಾಜರು ತಮ್ಮ ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಲೇ ಸಾಗಿದ್ದರೆಂದು ತಿಳಿದುಬರುತ್ತದೆ.
ತ್ಯಾಗರಾಜರ ಭಕ್ತಿ ಶ್ರೇಷ್ಠತೆಯು ನಾದೋಪಾಸನೆಯ ಹಾದಿಯಲ್ಲಿ ಹರಿದು ಅವರನ್ನು ಮುಕ್ತಿ ಪದವಿಗೇರಿಸಿತು. ನಾದೋಪಾಸನೆಯಿಂದಲೂ ಮುಕ್ತಿಯನ್ನು ಗಳಿಸಬಹುದೆಂಬ ನಿಶ್ಚಲವಾದ ನಂಬಿಕೆಯನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಟ್ಟು ಬಿಡದೇ ರಾಮನ ದರ್ಶನವನ್ನು ಪಡೆದು ಕೃತಕೃತ್ಯರಾದವರು ತ್ಯಾಗರಾಜರು.
ಗುರು ವಿದ್ವಾನ್ ಪ್ರವೀಣ್ ಕುಮಾರ್ ಪಿ.
ಸಹಜವಾಗಿಯೇ ನಮ್ಮ ಭಾರತೀಯ ಸಂಸ್ಕೃತಿಯ ಕಲಾಪ್ರಕಾರಗಳು, ದೈವತ್ವದ ಮೇಲ್ಮೆಯನ್ನು ಪ್ರತಿಬಿಂಬಿಸುತ್ತವೆ. ಪರಮಾತ್ಮನೊಂದಿಗೆ ಭಕ್ತಿ, ಪ್ರೇಮ, ನಿಂದೆ ಎಲ್ಲವೂ ಸಾಧ್ಯವಾಗಿ ಕೊನೆಯಲ್ಲಿ ಆತ್ಮವು ಸೇರುವುದೂ ಕೂಡ ಪರಮಾತ್ಮನನ್ನೇ ಎಂಬ ಆಧ್ಯಾತ್ಮಿಕ ಔನ್ನತ್ಯ ನಮ್ಮ ಪ್ರತೀ ಕಲಾಪ್ರಕಾರಗಳಲ್ಲೂ ಕಂಡುಬರುತ್ತವೆ. ಇಂತಹ ಪರಮಾನಂದಕರ ಅನುಭವ ನೀಡುವಲ್ಲಿ ಪ್ರವೀಣ್ ಕುಮಾರ್ ನಿಪುಣರು. ತಮ್ಮ ನೃತ್ಯದಿಂದ ತೀರಾ ಸಾಮಾನ್ಯರನ್ನು ತಮ್ಮತ್ತ ಸೆಳೆಯುವ ಶಕ್ತಿ ಪ್ರವೀಣ್ ಕುಮಾರರ ನಾಟ್ಯಕ್ಕಿದೆ.
ನೋಡ ನೋಡುತ್ತಿದ್ದಂತೆ ಮುಗಿದುಬಿಟ್ಟಿತೇ… ಇನ್ನೂ ಇರಬೇಕಿತ್ತು ಎಂಬ ಭಾವ ಹುಟ್ಟಿಸುವ ಪ್ರವೀಣ್ ಕುಮಾರ್ ಮತ್ತವರ ಶ್ರೇಷ್ಠ ಶಿಷ್ಯವರ್ಗ ತ್ಯಾಗರಾಜರ ಯಾವ ಕೃತಿಗಳಿಗೆ ತಮ್ಮ ನಾಟ್ಯಮಾಲೆಯನ್ನು ಪೋಣಿಸಿ ರಾಮನಿಗರ್ಪಿಸಲಿದ್ದಾರೆಂಬ ಕುತೂಹಲ ಪ್ರವೀಣರನ್ನು ಬಲ್ಲ ಪ್ರತೀ ಪ್ರೇಕ್ಷಕ ವರ್ಗಕ್ಕೂ ಇದೆ ಎಂದರೆ ಅತಿಶಯೋಕ್ತಿ ಅಲ್ಲ.
ಇಂತಹ ಕುತೂಹಲ ತಣಿಸಿಕೊಳ್ಳುವ ಆಸೆ ನಿಮ್ಮಗಿದ್ದರೆ ಎಡಿಎ ರಂಗಮಂದಿರದಲ್ಲಿ 8 ಜನರ ನೃತ್ಯ ವೈಭವಕ್ಕೆ ಬೆನ್ನುಲುಬಾಗಿ ನಿಲ್ಲಬಲ್ಲ ಐವರು ಸಂಗೀತ ವಿದ್ವಾಂಸರ ಹಿಮ್ಮೇಳದ ಸೊಬಗನ್ನು ಕಣ್ತುಂಬಿಕೊಳ್ಳಲು ಡಿಸೆಂಬರ್ 13 ಮತ್ತು 14 ರಂದು ಸಂಜೆ 7 ಗಂಟೆಗೆ ಖಂಡಿತ ಹಾಜರಾಗಿ. ನೀವೀಗಲೇ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳದಿದ್ದರೆ ತ್ಯಾಗರಾಜ ಹೃತ್ಸದನನಾದ ರಾಮನನ್ನು ನೋಡುವ ಅವಕಾಶದಿಂದ ವಂಚಿತರಾಗುತ್ತೀರಿ.. ಟಿಕೆಟ್ ಲಿಂಕ್ ಇಲ್ಲಿದೆ