ಬೆಂಗಳೂರು : ನಗರದಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಿದೆ. ಇದರ ಮಧ್ಯೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬರದೇ ರೋಗಿಗಳು ಪರದಾಡುತ್ತಿದ್ದಾರೆ. ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಆಂಬುಲೆನ್ಸ್ ಸಂಸ್ಥೆಗಳು ಹಗಲು ದರೋಡೆಗೆ ಇಳಿದಿವೆ. ಇದೀಗ ಈ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಖಾಸಗಿ ಆಸ್ಪತ್ರೆಗಳ ರೀತಿಯಲ್ಲೇ ಖಾಸಗಿ ಆಂಬುಲೆನ್ಸ್ ಗಳಿಗೂ ದರ ನಿಗದಿ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಗರದಲ್ಲಿ ಖಾಸಗಿ ಆಂಬ್ಯುಲೆನ್ಸ್ ಗಳು ರೋಗಿಗಳಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡೋವಾಗ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಅದಕ್ಕೆ ಪಾಲಿಸಿ ತಂದಿತ್ತು. ಅದೇ ರೀತಿ ಈಗ ಆಂಬುಲೆನ್ಸ್ ವಿಚಾರವಾಗಿ ಪಾಲಿಸಿ ತರುತ್ತೇವೆ. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿ, ಇದಕ್ಕೆ ಒಂದು ಪಾಲಿಸಿ ಜಾರಿಗೆ ತರುತ್ತೇವೆ ಎಂದು ರಾಮಲು ತಿಳಿಸಿದ್ದಾರೆ.








