ಬೆಂಗಳೂರು : ಕೋವಿಡ್-19 ಉಪಕರಣ ಖರೀದಿ ದಾಖಲೆಗಳನ್ನು ಕಾಂಗ್ರೆಸ್ ಗೆ ನೀಡಿದ್ದು ಬೀಳಗಿ ಶಾಸಕ ಮುರುಗೇಶ್ ನಿರಾಣಿ ಅವರೇ, ನಿರಾಣಿ ಬಳಿ ಇದಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಇದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿಡುತ್ತಿದ್ದು, ಈ ಬಗ್ಗೆ ನಿರಾಣಿ ಅವರು ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಕೋವಿಡ್-19 ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ದಾಖಲೆಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಯಾವುದೇ ಪೆನ್ ಡ್ರೈವ್ ಇಲ್ಲ. ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡಲು ಖರೀದಿ ಮಾಡಿರುವ ವೈದ್ಯಕೀಯ ಸಲಕರಣೆಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದಕ್ಕೆ ಸಂಬಂಧಿಸಿದ 125 ಪುಟಗಳ ದಾಖಲೆಗಳ ಪೆನ್ ಡ್ರೈವ್ ತಮ್ಮ ಬಳಿ ಇದೆ ಎಂದು ಕೆಲವು ಸಾಮಾಜಿಕ ತಾಣಗಳು, ವೆಬ್ ಪೋರ್ಟಲ್ ಹಾಗೂ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ.
ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬರು ಅಧಿಕಾರಿ ಬಂದಿದ್ದರು, ಅವರು ಸುಮಾರು 125 ಪುಟಗಳ ದಾಖಲೆಗಳ ಪೆನ್ ಡ್ರೈವ್ ತಂದಿದ್ದು, ಅದನ್ನು ತಮಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿರುವುದು ನಿರಾಧಾರವಾಗಿದೆ.
ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಖರೀದಿಸಿರುವ ವೆಂಟಿಲೇಟರ್, ಪಿಪಿಇ ಕಿಟ್, ಮುಖಗವಸು, ಸರ್ಜಿಕಲ್ ಕೈಗವಸು, ಪರೀಕ್ಷೆ ಕೈಗವಸು, ಆಮ್ಲಜನಕ ಸಿಲಿಂಡರ್, ಕೋವಿಡ್ ಪರೀಕ್ಷೆ ಸೋಂಕಿತರ ದಿನದ ಖರ್ಚು ಸೇರಿದಂತೆ ಇತರೆ ವೆಚ್ಚಗಳ ದಾಖಲೆಗಳು ನನ್ನ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.