ಕಲಬುರಗಿ: ಜೀವಂತ ಇದ್ದ ಪತಿ ಸತ್ತಿದ್ದಾನೆಂದು ಸುಳ್ಳು ಮರಣ ಪ್ರಮಾಣ ಪತ್ರ ಸಲ್ಲಿಸಿ ಮಹಿಳೆಯೊಬ್ಬರು ಪಿಂಚಣಿ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಸ್ವತಃ ಪತಿಯೇ ದೂರು ನೀಡಿದ್ದಾರೆ. 2019ರಿಂದ ಜುಲೈನಿಂದ 2022ರ ಜನವರಿ ವರೆಗೆ ಈ ರೀತಿ ಪಿಂಚಣಿ ಪಡೆದಿದ್ದಾಳೆ ಎಂದು ಆರೋಪಿಸಿ ಪತಿಯೇ ದೂರು ಸಲ್ಲಿಸಿದ್ದಾರೆ. ನಿವೃತ್ತ ನೌಕರ ರುಕ್ಮಣ್ಣ ಮಡಿವಾಳ ಅವರು ತಮ್ಮ ಪತ್ನಿ ಬೀದರ್ ಜಿಲ್ಲೆಯ ಖೇಣಿ ರಂಜೋಳ ಗ್ರಾಮದಲ್ಲಿದ್ದ ಶಕುಂತಲಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದಂಪತಿಗೆ ಮೂವರು ಪುತ್ರರಿದ್ದಾರೆ. ಆದರೆ, ಮದುವೆಯಾದ 11 ವರ್ಷಗಳ ನಂತರ ಇಬ್ಬರು ದೂರವಾಗಿದ್ದರು.
ಜೀವನಾಂಶ ಭತ್ಯೆ ನೀಡುವಂತೆ ಶಕುಂತಲಾ ಅವರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆಗೆ ಹಾಜರಾದಾಗ ಪತಿ ಮೃತಪಟ್ಟಿದ್ದಾರೆ ಎಂದು ಬೀದರ್ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಿಂದ ಸುಳ್ಳು ಮರಣ ಪ್ರಮಾಣ ಪತ್ರ ಪಡೆದು, ವಿಧವಾ ವೇತನ ಪಡೆದಿದ್ದು, 2022ರಲ್ಲಿ ಅದನ್ನು ವಯೋವೃದ್ಧರ ಪಿಂಚಣಿ ಎಂದು ಬದಲಾಯಿಸಿಕೊಂಡಿದ್ದಾಳೆ ಎಂದು ಆರೋಪಿಸಿ ರುಕ್ಮಣ್ಣ ದೂರು ಸಲ್ಲಿಸಿದ್ದಾರೆ.