ಬಾಲ್ಯದಿಂದಲೂ ಆಡಿ ಬೆಳೆದ ಸ್ನೇಹಿತರು ಬಿಟೆಕ್ ಓದಿ, ಕೆಲಸ ಅರಸಿ ಬೆಂಗಳೂರಿಗೆ ಬಂದು ಕಳ್ಳತನದ ಹಾದಿ ಹಿಡಿದು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಸದ್ಯ ಹನುಮಂತನಗರ ಪೊಲೀಸರು, ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಹೇಮಾದ್ರಿ ಹಾಗೂ ಪವನ್ ಬಂಧಿತ ಆರೋಪಿಗಳು. ಹೇಮಾದ್ರಿ ಹಾಗೂ ಪವನ್ ಮೂಲತಃ ಆಂಧ್ರದ ಬಾಲಯ್ಯಪಲ್ಲಿ ನಿವಾಸಿಗಳಾಗಿದ್ದಾರೆ. ಬಿಟೆಕ್ ಪದವಿ ಮುಗಿಸಿದ್ದ ಇಬ್ಬರೂ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಹುಟ್ಟೂರಿನಲ್ಲಿರುವ ಹಲವರಿಗೆ ಒಳ್ಳೆಯ ಕೆಲಸ ಸಿಕ್ಕಿದೆ ಎಂದು ಬಿಲ್ಡಪ್ ಕೊಟ್ಟಿದ್ದರು. ಆದರೆ, ಬೆಂಗಳೂರಿನಲ್ಲಿ ಕೆಲಸ ಸಿಗದೆ ಯುವಕರು ಪರದಾಡಿದ್ದರು. ನಂತರ ಹುಟ್ಟೂರಿನಲ್ಲಿ ಕೊಟ್ಟ ಬಿಲ್ಡಪ್ ಗಾಗಿ ಕಳ್ಳತನದ ಹಾದಿ ಹಿಡಿದಿದ್ದರು. ಯೂಟ್ಯೂಬ್ ನಲ್ಲಿ ಬೈಕ್ ಕದಿಯೋದನ್ನು ಕಲಿತು ಕಳ್ಳತನದ ಹಾದಿ ಹಿಡಿದಿದ್ದರು.
ಬೆಂಗಳೂರಿನ ಹನುಮಂತನಗರ ಠಾಣಾ ವ್ಯಾಪ್ತಿಯ ಬುಲೆಟ್ ಬೈಕ್ ಗಳನ್ನು ಕದಿಯುತ್ತಿದ್ದ ಆರೋಪಿಗಳು, ಕದ್ದ ಬೈಕನ್ನ ತೆಗೆದುಕೊಂಡು ಹೋಗಿ ಹುಟ್ಟೂರಿನಲ್ಲಿ ಬಿಲ್ಡಪ್ ಕೊಡುತ್ತಿದ್ದರು. ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆಂಧ್ರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.








