ಬಾಹುಬಲಿ ಬ್ರಹ್ಮ ಎಸ್ ಎಸ್ ರಾಜಮೌಳಿ ಅವರು ಅಮೀರ್ ಖಾನ್ ಜೊತೆ ಮಹಾಭಾರತ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ವರ್ಷಗಳಿಂದ ಸಿನಿಮಾರಂಗದ ಪಡಸಾಲೆಯಲ್ಲಿ ಸದ್ದು ಮಾಡುತ್ತಲೇ ಇದೆ. ಬಾಹುಬಲಿ ಸಿನಿಮಾ ಬಳಿಕ ಜಕ್ಕನ್ನ ಮಹಾಭಾರತ ಸಿನಿಮಾ ಮಾಡ್ತಾರೆ, ಇದರಲ್ಲಿ ಬಾಲಿವುಡ್ ಸ್ಟಾರ್ ಗಳೂ ಸೇರಿದಂತೆ ಭಾರತೀಯ ಚಿತ್ರರಂಗ ಖ್ಯಾತನಾಮರು ಕಾಣಿಸಿಕೊಳ್ಳಲಿದ್ದಾರೆ. ಸುಮಾರು 1 ಸಾವಿರ ಕೋಟಿ ಬಜೆಟ್ ನಲ್ಲಿ ಮಹಾಭಾರತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.
ಆದ್ರೆ ರಾಜಮೌಳಿ ಮಾತ್ರ ಎಲ್ಲೂ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಜಕ್ಕನ್ನ ಈ ಸಿನಿಮಾದ ನಂತರ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.
ಇದು ಒಂದು ಕಡೆಯಾದ್ರೆ ಬಾಹುಬಲಿಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್ ಅವರು ಅಮೀರ್ ಜೊತೆ ಮಾತುಕತೆ ನಡೆಸಿ, ಮಹಾಭಾರತ ಸ್ಕ್ರಿಪ್ಟ್ ಕೆಲಸ ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನಾಡಿದ ವಿಜಯೇಂದ್ರ ಪ್ರಸಾದ್, ಅಮೀರ್ ಖಾನ್ ಜೊತೆ ಯಾವುದೆ ಮಾತುಕತೆ ನಡೆದಿಲ್ಲ. ಇದೆಲ್ಲ ಸುಳ್ಳು ಸುದ್ದಿ. ಮಹಾಭಾರತ ಸಂಬಂಧಿ ಯಾವುದೆ ಕೆಲಸಗಳು ನಡೆಯುತ್ತಿಲ್ಲ. ಸಂವಹನಕ್ಕೆ ಭಾಷೆ ಅಡ್ಡಿಯಾಗುತ್ತಿದೆ. ಎಲ್ಲವನ್ನೂ ಫೋನ್ ನಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.