ಡೆಬಿಟ್ ಕಾರ್ಡ್ ಎಟಿಎಂ ಯಂತ್ರದಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು
ಹೊಸದಿಲ್ಲಿ, ಜೂನ್ 26: ನಿಮ್ಮ ಡೆಬಿಟ್ ಕಾರ್ಡ್ ನೀವು ಹಣ ಡ್ರಾ ಮಾಡಲು ಹೋದಾಗ ಎಟಿಎಂ ಯಂತ್ರದಲ್ಲಿ ಸಿಲುಕಿಕೊಂಡರೆ ನೀವು ಅಂತಹ ಸಂದರ್ಭದಲ್ಲಿ ಏನು ಮಾಡುವಿರಿ. ಇದು ನಮ್ಮಲ್ಲಿ ಅನೇಕರಿಗೆ ಆಗಿರುವ ಅನುಭವ.
ಇದು ಏಕೆ ಸಂಭವಿಸುತ್ತದೆ ಮತ್ತು ಕಾರ್ಡ್ ಅನ್ನು ಮರಳಿ ಪಡೆಯಲು ಒಬ್ಬರು ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ನಿಮ್ಮ ಡೆಬಿಟ್ ಕಾರ್ಡ್ ಎಟಿಎಂ ಯಂತ್ರದಲ್ಲಿ ಸಿಲುಕಿದರೆ ಮೊದಲು ಸಂಬಂಧಪಟ್ಟ ಬ್ಯಾಂಕ್ ನ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ.
ಕಾರ್ಡ್ ಯಾವ ಕಾರಣದಿಂದ ಎಟಿಎಂ ಯಂತ್ರದಲ್ಲಿ ಸಿಲುಕಿಕೊಂಡಿದೆ ಮತ್ತು ಎಟಿಎಂನ ಲೋಕೇಶನ್ ತಿಳಿಸಿ
ನೀವು ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದಾಗ ಕಸ್ಟಮರ್ ಕೇರ್ ಪ್ರತಿನಿಧಿ ನಿಮ್ಮ ಮುಂದೆ ಡೆಬಿಟ್ ಕಾರ್ಡ್ ಕ್ಯಾನ್ಸಲ್ ಅಥವಾ ಡೆಬಿಟ್ ಕಾರ್ಡ್ ಅನ್ನು ಹೇಗೆ ಮರಳಿ ಪಡೆಯುವುದು ಎಂಬ ಆಯ್ಕೆ ನೀಡುತ್ತಾರೆ.
ನಿಮಗೆ ನಿಮ್ಮ ಡೆಬಿಟ್ ಕಾರ್ಡ್ ದುರ್ಬಳಕೆಯಾಗಲಿದೆ ಎಂದು ಅನಿಸಿದರೆ, ನೀವು ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬಹುದು. ಬಳಿಕ 7 ರಿಂದ 10 ದಿನಗಳ ಒಳಗೆ ಬ್ಯಾಂಕ್ ನಿಮ್ಮ ವಿಳಾಸಕ್ಕೆ ಹೊಸ ಕಾರ್ಡ್ ಅನ್ನು ಕಳುಹಿಸಲಿದೆ. ನಿಮಗೆ ಬೇಗನೆ ಕಾರ್ಡ್ ಪಡೆಯಬೇಕಾದಲ್ಲಿ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ.
ಎಟಿಎಂ ಯಂತ್ರದಲ್ಲಿ ಸಿಲುಕಿರುವ ಕಾರ್ಡ್ ಅನ್ನು ನೀವು ಪಡೆಯಲು ಬಯಸಿದರೆ, ಕಸ್ಟಮರ್ ಕೇರ್ ಪ್ರತಿನಿಧಿಗೆ ಈ ಬಗ್ಗೆ ಸೂಚಿಸಬಹುದು. ನಿಮ್ಮ ಕಾರ್ಡ್ ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ ಗೆ ಸಂಬಂಧಪಟ್ಟ ಎಟಿಎಂ ನಲ್ಲಿ ಸಿಲುಕಿ ಕೊಂಡಿದ್ದರೆ ನೀವು ಕಾರ್ಡ್ ಅನ್ನು ಸುಲಭವಾಗಿ ವಾಪಸು ಪಡೆಯಬಹುದಾಗಿದೆ.
ಬೇರೆ ಬ್ಯಾಂಕ್ ನ ಎಟಿಎಂ ನಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಸಿಲುಕಿದ್ದರೆ, ಆ ಬ್ಯಾಂಕ್ ನಿಮ್ಮ ಡೆಬಿಟ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಗೆ ಹಸ್ತಾಂತರಿಸಲಿದೆ. ನಂತರ ನಿಮ್ಮ ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ನಿಮಗೆ ಹಿಂತಿರುಗಿಸಲಿದೆ.
ಎಟಿಎಂ ಯಂತ್ರದಲ್ಲಿ ನಿಮ್ಮ ಕಾರ್ಡ್ ಸಿಲುಕಿ ಕೊಂಡ ಪಕ್ಷದಲ್ಲಿ ಎಟಿಎಂಗೆ ಹಣ ಹಾಕುವ ವೆಂಡರ್ ಗೆ ಮೊದಲು ನಿಮ್ಮ ಕಾರ್ಡ್ ಸಿಗಲಿದೆ. ಬಳಿಕ ಕಾರ್ಡ್ ಅನ್ನು ವೆಂಡರ್ ನಿಮ್ಮ ಬ್ಯಾಂಕ್ ಗೆ ಹಸ್ತಾಂತರಿಸುತ್ತಾರೆ. ಎಂತಹ ಸಂದರ್ಭದಲ್ಲಿಯೂ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ನಿಮ್ಮ ಕಾರ್ಡ್ ಸುರಕ್ಷಿತವಾಗಿ ಇರಲಿದ್ದು, ಈ ಎಲ್ಲ ಪ್ರಕ್ರಿಯೆಯೂ ಆರ್.ಬಿ.ಐನ ನಿರ್ದೇಶನಗಳ ಅಡಿಯಲ್ಲಿ ಗೌಪ್ಯವಾಗಿ ನಡೆಯುತ್ತದೆ.

ಕಾರ್ಡ್ ಸಿಲುಕಿಕೊಳ್ಳಲು ಕಾರಣಗಳು
ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಲುಕಿಕೊಳ್ಳಲು ಪ್ರಮುಖ ಮೂರು ಕಾರಣಗಳು.
1. ಎಟಿಎಂ ಲಿಂಕ್ ಫೇಲ್ ಆಗುವುದು .
2. ಡೆಬಿಟ್ ಕಾರ್ಡ್ ಎಟಿಎಂ ಯಂತ್ರದಲ್ಲಿ ಹಾಕಿದ ನಂತರ ಪಿನ್ ಅಥವಾ ಮೊತ್ತ ಅಥವಾ ಅಕೌಂಟ್ ಆಯ್ಕೆ ಮಾಡುವಾಗ ವಿಳಂಬವಾದರೆ ಕಾರ್ಡ್ ಎಟಿಎಂ ಯಂತ್ರದಲ್ಲಿ ಸಿಲುಕಿಕೊಳ್ಳಲಿದೆ.
3. ಎಟಿಎಂ ಯಂತ್ರದ ವಿದ್ಯುತ್ ಸಂಪರ್ಕ ಕಡಿತಗೊಂಡರೆ ನಿಮ್ಮ ಕಾರ್ಡ್ ಯಂತ್ರದಲ್ಲಿ ಸಿಲುಕಿಕೊಳ್ಳಲಿದೆ.








