ಟೀಮ್ ಇಂಡಿಯಾದ “ಬಸ್ ಡ್ರೈವರ್” ಆಗಿ ಅಚ್ಚರಿಗೊಳಿಸಿದ್ದ ಧೋನಿ..!
ಅನೀರಿಕ್ಷಿತ ಅಚ್ಚರಿಗಳನ್ನು ನೀಡುವುದು ಮಹೇಂದ್ರ ಸಿಂಗ್ ಧೋನಿಯ ಖಯಾಲಿ. ಆದ್ರೆ ಧೋನಿಗೆ ಯಾವುದು ಕೂಡ ಅನಿರೀಕ್ಷಿತವೂ ಆಗಿರಲ್ಲ. ಅಚ್ಚರಿಯೂ ಆಗಿರಲ್ಲ. ಎಲ್ಲವೂ ಪೂರ್ವ ನಿಯೋಜಿತವಾಗಿರುತ್ತದೆ. ಹೀಗಾಗಿ ಧೋನಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಅಂದುಕೊಂಡಂತೆ ನಡೆಯುತ್ತಿರುತ್ತದೆ.
ಮೈದಾನದಲ್ಲಿ ನೀವು ಧೋನಿಯ ನಿರ್ಧಾರಗಳು ಎದುರಾಳಿ ತಂಡಗಳಿಗೆ ಗಲಿಬಿಲಿಯನ್ನುಂಟು ಮಾಡುತ್ತಿರುವುದನ್ನು ಅನೇಕ ಬಾರಿ ನೋಡಿದ್ದೇವೆ. ಹಾಗೇ ಟೀಮ್ ಇಂಡಿಯಾದ ಸಹ ಆಟಗಾರರಿಗೂ ಧೋನಿ ಅನೇಕ ಬಾರಿ ಚಮಕ್ ಕೊಟ್ಟಿದ್ದಾರೆ. ಧೋನಿಯ ಚಮಕ್ ನಿಂದಾಗಿ ಸಹ ಅಟಗಾರರು ಕೂಡ ಚಕಿತರಾಗಿದ್ದಾರೆ.
ಹೌದು, ಧೋನಿ ಅಚ್ಚರಿಯ ನಿರ್ಧಾರವೊಂದರ ಬಗ್ಗೆ ಸ್ಟೈಲೀಸ್ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ನೆನಪು ಮಾಡಿಕೊಂಡಿದ್ದಾರೆ. ಅದು 2008ರ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ. ಆ ಸರಣಿಯ ಮಧ್ಯೆ ಅನಿಲ್ ಕುಂಬ್ಳೆ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿದ್ದರು. ಅಲ್ಲಿಯವರೆಗೆ ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳಿಗೆ ನಾಯಕತ್ವದ ವಹಿಸುತ್ತಿದ್ದ ಧೋನಿ ಟೆಸ್ಟ್ ಕ್ರಿಕೆಟಿಗೂ ನಾಯಕನಾದ್ರು.
ನಾಗ್ಪುರದಲ್ಲಿ ನಡೆದಿದ್ದ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯ. ಧೋನಿ ಟೀಮ್ ಇಂಡಿಯಾದ
ನಾಯಕನಾಗಿದ್ದರು. ಆಟಗಾರರು ಕ್ರೀಡಾಂಗಣದಿಂದ ಹೊಟೇಲ್‍ಗೆ ಹೊರಡಲು ಬಸ್ ನಲ್ಲಿ ಕೂತಿದ್ದರು. ಹಾಗೇ ಧೋನಿ ಕೂಡ ಬಸ್ ಹತ್ತಿದ್ದರು. ಆದ್ರೆ ಅವರು ತನ್ನ ಸೀಟ್ ನಲ್ಲಿ ಹೋಗಿ ಕೂರಲಿಲ್ಲ. ಬದಲಾಗಿ ಸೀದಾ ಹೋಗಿ ಡ್ರೈವಿಂಗ್ ಸೀಟ್ ನಲ್ಲಿ ಕೂತರು. ಡ್ರೈವರ್‍ಗೆ ಹಿಂದೆ ಹೋಗಿ ಕುಳಿತುಕೊಳ್ಳುವಂತೆ ಸೂಚನೆ ನೀಡಿದ್ರು. ಧೋನಿ ಆರಾಮವಾಗಿಯೇ ಬಸ್ ಚಲಾವಣೆ ಮಾಡಿಕೊಂಡು ಆಟಗಾರರನ್ನು ಸುರಕ್ಷಿತವಾಗಿ ಹೊಟೇಲ್‍ಗೆ ತಲುಪಿಸಿದ್ದರು. ಬಸ್ ನಲ್ಲಿ ಕುಳಿತಿದ್ದ ಸಹ ಆಟಗಾರರಿಗೆ ಧೋನಿಯ ಈ ನಡೆಯಿಂದ ಅಚ್ಚರಿಗೊಂಡಿದ್ದರು.
ಹಾಗಂತ ಧೋನಿ ಈ ರೀತಿ ಮಾಡಿದ್ದು ಇದೇನೂ ಮೊದಲ ಬಾರಿ ಏನಲ್ಲ. ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕ ಆಟಗಾರರ ಬೈಕ್ ಮತ್ತು ವ್ಯಾನ್‍ಗಳನ್ನು ಧೋನಿ ಡ್ರೈವ್ ಮಾಡಿಕೊಂಡು ಮಜಾ ಅನುಭವಿಸಿದ್ದಾರೆ. ಇನ್ನು ಪಿಚ್ ರೋಲರ್ ಅನ್ನು ಕೂಡ ಚಾಲನೆ ಮಾಡಿದ್ದಾರೆ.
ಅಷ್ಟಕ್ಕೂ ಧೋನಿ ಮೈದಾನದೊಳಗಡೆ ಅಪ್ಪಟ ಕ್ರಿಕೆಟಿನಾಗಿದ್ದರು. ವೃತ್ತಿಪರತೆ, ಶಿಸ್ತು, ಏಕಾಗ್ರತೆ ಎಲ್ಲವೂ ಇತ್ತು. ಆದ್ರೆ ಒಂದು ಬಾರಿ ಮೈದಾನದಿಂದ ಹೊರಗಡೆ ಬಂದ್ರೆ ಧೋನಿಗೆ
ಎಲ್ಲವೂ ಸಾಮಾನ್ಯವಾಗಿತ್ತು. ಬದುಕನ್ನು ಧೋನಿ ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ವಿಶ್ರಾಂತಿ ಸಮಯದಲ್ಲಿ ಧೋನಿ ಬೈಕ್ ಓಡಿಸುವುದು, ತನ್ನ ನೆಚ್ಚಿನ ಕಾರನ್ನು ಚಾಲನೆ ಮಾಡಿಕೊಂಡು ಲಾಂಗ್ ಡ್ರೈವ್ ಮಾಡುವುದೆಲ್ಲಾ ಧೋನಿಯ ನೆಚ್ಚಿನ ಹವ್ಯಾಸವಾಗಿತ್ತು. ಇತ್ತೀಚೆಗೆ ಕೃಷಿ ಭೂಮಿಗಾಗಿ ಟ್ರ್ಯಾಕ್ಟರ್ ಖರೀದಿ ಮಾಡಿ ಅದನ್ನು ಕೂಡ ಚಾಲನೆ ಮಾಡಿದ್ದರು. ಒಟ್ಟಿನಲ್ಲಿ ಜೀವನವನ್ನು ಧೋನಿ ತಾನು ಅಂದುಕೊಂಡಂತೆ ಸಾಗಿಸುತ್ತಾರೆ. ಅಲ್ಲಿ ಎಲ್ಲವೂ ಪರ್ಫೆಕ್ಟ್.








