ಧೋನಿಯ ಕ್ರಿಕೆಟ್ ಬದುಕು ಆರಂಭವಾಗಿದ್ದು ಎಲ್ಲಿ ? ಹೇಗೇ..? ಯಾವಾಗ..?
1981… ಜುಲೈ 7.. ಅಂದ್ರೆ ಈ ದಿನ… ವಿಶ್ವ ಕ್ರಿಕೆಟ್ ನ ಎವರ್ ಗ್ರೀನ್ ಹೀರೋ ಮಹೇಂದ್ರ ಸಿಂಗ್ ಧೋನಿ ಹುಟ್ಟಿದ್ದು. ಬಹುಶಃ ಧೋನಿ ಮುಂದೊಂದು ದಿನ ಈ ಮಟ್ಟಕ್ಕೆ ಬೆಳೆಯುತ್ತಾರೆ ಅಂತ ಅವರ ಹೆತ್ತವರಿಗೂ ಗೊತ್ತಿರಲಿಲ್ಲ. ಆದ್ರೆ ಧೋನಿಯ ಹಣೆಬರೆಹವನ್ನು ಆ ಬ್ರಹ್ಮ ಮೊದಲೇ ಗೀಚಿದ್ದ. ಅದಕ್ಕಾಗಿ ಧೋನಿ ಸುಮಾರು ವರ್ಷ ತಪಸ್ಸಿನಂತೆ ಕಾಯಬೇಕಾಗಿತ್ತು. 23 ವರ್ಷದಲ್ಲಿ ಟೀಮ್ ಇಂಡಿಯಾವನ್ನು ಪ್ರವೇಶ ಮಾಡಿದ್ದ ಧೋನಿ ನಂತರ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ತಾನೇ ಬರೆದುಕೊಂಡ್ರು. ನೋಡ ನೋಡುತ್ತಲೇ ಯಶಸ್ಸಿನ ಉತ್ತುಂಗಕ್ಕೇರಿದ್ರು. ಈಗ ಎಲ್ಲವೂ ಇತಿಹಾಸ…
ಧೋನಿ ಕ್ರಿಕೆಟಿಗನಾಗಿದ್ದು ಆಕಸ್ಮಿಕ. ಶಾಲಾ ಫುಟ್ಬಾಲ್ ತಂಡದ ಗೋಲ್ ಕೀಪರ್ ಆಗಿದ್ದ ಧೋನಿ, ಕ್ರಿಕೆಟ್ ಆಟದಲ್ಲಿ ವಿಕೆಟ್ ಕೀಪರ್ ಆಗಿರುವುದರ ಹಿಂದೆ ದೊಡ್ಡ ಕಥೆನೇ ಇದೆ. ಆದ್ರೆ ವಿಕೆಟ್ ಕೀಪರ್ ಆದ ನಂತರ ಧೋನಿಯ ಕ್ರಿಕೆಟ್ ಬದುಕು ಶುರುವಾಯ್ತು. ಸಿಕ್ಸರ್ ಸಿಡಿಸುವ ಮೂಲಕವೇ ಖ್ಯಾತಿ ಪಡೆದಿದ್ದ ಧೋನಿ 1998-99ರ ತನಕ ಕೇವಲ ಶಾಲಾ ಕ್ರಿಕೆಟಿಗನಾಗಿದ್ದರು. ಕ್ಲಬ್ ಕ್ರಿಕೆಟಿಗನಾಗಿದ್ದರು. ಅಂದ ಹಾಗೇ ವೃತ್ತಿಪರತೆಯ ಕ್ರಿಕೆಟ್ ಆಡಿದ್ದು ಧೋನಿ ತನ್ನ 17ರ ಹರೆಯದಲ್ಲಿ.
ಅದು ಕೂಚ್ ಬೀಹಾರ್ 19 ವಯೋಮಿತಿಯ ಕ್ರಿಕೆಟ್ ಟೂರ್ನಿ. ಧೋನಿ ಬಿಹಾರ ತಂಡದ ಪರ ಆಡಿದ್ದರು. ಬಿಹಾರ್ ಕ್ರಿಕೆಟ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ದೇವಾಲ್ ಸಹಾಯ್ ಅವರ ಸಹಾಯದಿಂದ ಧೋನಿ ಬಿಹಾರ 19 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದ್ರು. ಅದು ಕೂಡ ವಿಕೆಟ್ ಕೀಪರ್ ಆಗಿ. ಆಗ ಬಿಹಾರ ತಂಡವನ್ನು ಸುಮಿತ್ ಪಾಂಡ್ಯ ಅವರು ಮುನ್ನೆಡೆಸಿದ್ದರು. ಆಗ ಧೋನಿಯ ವಯಸ್ಸು ಕೇವಲ 17.
ಜೆಮ್ಶೆಡ್ಪುರದ ಮೈದಾನದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಬಿಹಾರ ತಂಡ, ಬಂಗಾಳ 19 ವಯೋಮಿತಿ ವಿರುದ್ಧ ಆಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡ 6 ವಿಕೆಟ್ ನಷ್ಟಕ್ಕೆ 266 ರನ್ ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಮಹೀರ್ ಸಿಂಗ್ ದಿವಾಕರ್ ನಾಲ್ಕು ವಿಕೆಟ್ ಉರುಳಿಸಿದ್ರು. ಹಾಗೇ ಮಹೇಂದ್ರ ಸಿಂಗ್ ಧೋನಿಯವರು ಎಸ್ಎಸ್ ಚಟರ್ಜಿಯವರ ಕ್ಯಾಚ್ ಅನ್ನು ಹಿಡಿದಿದ್ದರು. ಹಾಗೇ ಈ ಪಂದ್ಯದಲ್ಲಿ ಲಕ್ಷ್ಮಿ ರತನ್ ಶುಕ್ಲಾ ಕೂಡ ಆಡಿದ್ದರು.
ನಂತರ ಬ್ಯಾಟ್ ಮಾಡಿದ್ದ ಬಿಹಾರ ತಂಡ ಬಂಗಾಳದ ದಾಳಿಗೆ ನಲುಗಿ ಹೋಗಿತ್ತು. ಅಗ್ರ ಕ್ರಮಾಂಕದ ಬ್ಯಾಟ್ಸ್ ಮೆನ್ಗಳು ಒಂದಂಕಿ ಮೊತ್ತಕ್ಕೆ ಸೀಮಿತರಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ನಂತರ ಹಶ್ಮಿ ಅವರ ಜೊತೆ ಸೇರಿದ್ದು ಮಹೇಂದ್ರ ಸಿಂಗ್ ಧೋನಿ. ಈ ಪಂದ್ಯದಲ್ಲಿ ಹಶ್ಮಿ ಅವರು 55 ರನ್ ಗಳಿಸಿದ್ರೆ, ಧೋನಿ 33 ರನ್ ದಾಖಲಿಸಿದ್ದರು. ಅಲ್ಲದೆ ಹಶ್ಮಿ ಜೊತೆ ಸೇರಿ 64 ರನ್ ಗಳ ಜೊತೆಯಾಟವನ್ನು ಧೋನಿ ಆಡಿದ್ದರು. ಅಂತಿಮವಾಗಿ ಬಿಹಾರ ತಂಡ 8 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಅಂದ ಹಾಗೇ ಬಿಹಾರ ತಂಡದ ಪರ ಏಕೈಕ ಸಿಕ್ಸರ್ ಸಿಡಿಸಿದ್ದು ಕೂಡ ಧೋನಿಯೇ.
ಒಟ್ಟಾರೆ, ಕೂಚ್ ಬಿಹಾರ್ ಟೂರ್ನಿಯಲ್ಲಿ ಧೋನಿ ಒಟ್ಟು ಐದು ಪಂದ್ಯಗಳಲ್ಲಿ ಏಳು ಇನಿಂಗ್ಸ್ ಗಳನ್ನು ಆಡಿದ್ದರು. ಇದ್ರಲ್ಲಿ ಒಂದು ಅರ್ಧಶತಕದ ಜೊತೆ ಒಟ್ಟು 185 ರನ್ ದಾಖಲಿಸಿದ್ದರು. ಇನ್ನು ಫೈನಲ್ ಪಂದ್ಯದಲ್ಲಿ ಆಡಿದ್ದ ಧೋನಿ ಆಕರ್ಷಕ 84 ರನ್ ಗಳಿಸಿದ್ದರು. ಆದ್ರೆ ಈ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ 358 ರನ್ಗಳ ಮುಂದೆ ಧೋನಿಯ 84 ರನ್ಗಳು ಕಾಣಲೇ ಇಲ್ಲ. ಅಂತಿಮವಾಗಿ ಯುವರಾಜ್ ಸಿಂಗ್ ಟೀಮ್ ಇಂಡಿಯಾವನ್ನು ಪ್ರವೇಶಿಸಿದ್ರು. ಯುವಿಯ ನಂತರ ಮೂರು ವರ್ಷಗಳ ಬಳಿಕ ಧೋನಿ ಟೀಮ್ ಇಂಡಿಯಾಗೆ ಎಂಟ್ರಿಯಾದ್ರು. ಬಳಿಕ ನಡೆದಿರುವುದೆಲ್ಲಾ ಗೊತ್ತೆ ಇದೆ…!