ಆಸೀಸ್ ಟಿ-20 ತಂಡದಲ್ಲಿ ಭಾರತೀಯ ಮೂಲದ ಆಟಗಾರ.. ಭವಿಷ್ಯದ ಮ್ಯಾಜಿಷಿಯನ್ ಬೌಲರ್ …!
ತನ್ವೀರ್ ಸಂಘಾ….
ಆಸ್ಟ್ರೇಲಿಯಾದ ಯುವ ಸ್ಪಿನ್ನರ್.. 19ರ ಹರೆಯದ ತನ್ವೀರ್ ಸಂಘಾ ಆಸ್ಟ್ರೇಲಿಯಾ ಟಿ-20 ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತೀಯ ಮೂಲದ ಆಟಗಾರ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ತನ್ವೀರ್ ಸಂಘಾ ಮೂಲತಃ ಜಲಂಧರ್ ನವರು.
1997ರಲ್ಲಿ ತನ್ವೀರ್ ಸಂಘಾ ಅವರ ತಂದೆ ಜೋಗಾ ಅವರು ಸಿಡ್ನಿಗೆ ತೆರಳಿದ್ದರು. ಅಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಜೋಗಾ ಅವರು ಆಸ್ಟ್ರೇಲಿಯಾದ ನಾಗರೀಕತೆಯನ್ನು ಪಡೆದುಕೊಂಡ್ರು.
ಇದೀಗ ಮಗ ತನ್ವೀರ್ ಸಂಘಾ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ಅವರ ಖುಷಿಗೆ ಪಾರವೇ ಇಲ್ಲ. ಆದ್ರೆ ತನ್ನ ಮಗ ಕ್ರಿಕೆಟಿಗನಾಗುತ್ತಾನೆ.. ಮುಂದೊಂದು ದಿನ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಯಾಕಂದ್ರೆ ತನ್ವೀರ್ ಅವರ ತಂದೆ ಭಾರತದಲ್ಲಿ ಇರುವಾಗ ಕ್ರಿಕೆಟ್ ಪಂದ್ಯವನ್ನೇ ನೋಡುತ್ತಿರಲಿಲ್ಲ. ಕ್ರಿಕೆಟ್ ಬಗ್ಗೆ ಆಸಕ್ತಿಯೂ ಇರಲಿಲ್ಲ. ಕಬಡ್ಡಿ, ವಾಲಿಬಾಲ್, ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಜೋಗಾ ಅವರು ತನ್ನ ಮಗನ ಕ್ರಿಕೆಟ್ ಆಸಕ್ತಿಗೆ ಪ್ರೀತಿಯಿಂದಲೇ ಪ್ರೇರಣೆ ನೀಡಿದ್ದರು. ಮಗನ ಕ್ರಿಕೆಟ್ ಪ್ರತಿಭೆಯನ್ನು ಅರಿತುಕೊಂಡಿದ್ದ ಜೋಗ ಅವರು, ತನ್ವೀರ್ ಸಂಘಾ ಅವರ ಕ್ರಿಕೆಟ್ ಅಭ್ಯಾಸಕ್ಕಾಗಿ ಬೆನ್ನಲುಬಾಗಿ ನಿಂತ್ರು. ರಾತ್ರಿ ವೇಳೆ ಟ್ಯಾಕ್ಸಿ ಓಡಿಸಿ ಸಂಪಾದನೆ ಮಾಡುತ್ತಿದ್ದರು.
ತನ್ನ ಹತ್ತನೇ ಹರೆಯದಲ್ಲಿ ಕ್ರಿಕೆಟ್ ಗ್ರಾಮರ್ ಗಳನ್ನು ಕಲಿತುಕೊಂಡ ತನ್ವೀರ್ ಆಸ್ಟ್ರೇಲಿಯಾ ವಿವಿಧ ವಯೋಮಿತಿ ಟೂರ್ನಿಯಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು. ಅಲ್ಲದೆ 19 ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲೂ ಆಡಿದ್ದರು.
ಅಂದ ಹಾಗೇ ಲೆಗ್ ಸ್ಪಿನ್ನರ್ ಆಗಿರುವ ತನ್ವೀರ್ ಸಂಘಾ ಅವರು ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬ್ಯಾಷ್ ಲೀಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಸಿಡ್ನಿ ಥಂಡರ್ ತಂಡದ ಪರವಾಗಿ ಆಡಿದ್ದ ತನ್ವೀರ್, 14 ಪಂದ್ಯಗಳಲ್ಲಿ 21 ವಿಕೆಟ್ ಗಳನ್ನು ಕಬಳಿಸಿದ್ದರು. ಅಲ್ಲದೆ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಕೂಡ ಸೆಳೆದಿದ್ದರು.
ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಹೊಂದಿರುವ ತನ್ವೀರ್ ಸಂಘಾ ಅವರು ಅಸ್ಟ್ರೇಲಿಯಾದ ಭವಿಷ್ಯದ ಮ್ಯಾಜಿಷಿಯನ್ ಬೌಲರ್ ಅಂತಲೇ ಬಿಂಬಿತರಾಗುತ್ತಿದ್ದಾರೆ.
ಫೆಬ್ರವರಿ 27ರಿಂದ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ತನ್ವೀರ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಹಾಗೇ ಆಸ್ಟ್ರೇಲಿಯಾ ತಂಡದಲ್ಲಿ ಭಾರತೀಯ ಮೂಲದ ನಾಲ್ಕನೇ ಆಟಗಾರನಾಗಿದ್ದಾರೆ ತನ್ವೀರ್ ಸಂಘಾ. ಇದೀಗ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತದಲ್ಲಿ ಆಡುವ ಆಸೆಯನ್ನಿಟ್ಟುಕೊಂಡಿದ್ದಾರೆ.