ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ.. ಇದು ನಂಬಲು ಅಸಾಧ್ಯವಾದ ಕಠೋರ ವಾಸ್ತವ. ಐದು ದಶಕಗಳ ಕಾಲ ಸಂಗೀತ ಸೇವೆ ಮಾಡಿ ಎಲ್ಲರ ಮನೆಮನದಲ್ಲೂ ಮೆಂಮರ್ ಆಗಿರುವ ಎಸ್ ಪಿಬಿ ಇಂದು ಇಹಲೋಕ ತ್ಯಜಿಸಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿನ ಮೂಲಕವೇ ಎಲ್ಲರನ್ನು ಎಲ್ಲವನ್ನೂ ಗೆದ್ದಿದ್ದ ವ್ಯಕ್ತಿ, ವ್ಯಕ್ತಿತ್ವ. ತಮ್ಮ ಅಮೃತ ಕಂಠದ ಮೂಲಕ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾಯಕ. ಯಶಸ್ಸಿನ ಶಿಖರವೇರಿದ್ದರೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಸಾಹುಕಾರ.
ಮೊದಲ ಚಾನ್ಸ್ ಕೊಡಿಸಿದ್ದು ಜಾನಕಮ್ಮ
ಹೌದು..! ಆಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಇನ್ನೂ 17ರ ವರ್ಷ. ಕಾಲೇಜುಗಳಲ್ಲಿ ಹಲವಾರು ಸಿಂಗಿಂಗ್ ಕಾಂಪಿಟೇಶನ್ ಗಳಲ್ಲಿ ಹಾಡಿ ಬಹುಮಾನಗಳನ್ನು ಗೆಲ್ಲುತ್ತಿದ್ದರು. ಆಗ ಒಂದು ದಿನ ಜಾನಕಮ್ಮ ಒಂದು ಸ್ಪರ್ಧೆಗೆ ಬಂದಿದ್ದರು. ಈ ವೇಳೆ ಎಸ್ ಪಿಬಿ ಅವರ ಪ್ರತಿಭೆಯನ್ನು ಗುರುತಿಸಿದ್ದ ಜಾನಕಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅಲ್ಲದೆ ನೀನು ಪ್ಲೇ ಬ್ಯಾಕ್ ಸಿಂಗರ್ ಆಗು ಎಂದು ಹೇಳಿ, ಹಲವಾರು ಪರಿಚಿತ ನಿರ್ದೇಶಕರ ಬಳಿ ಅವರನ್ನು ಕಳಿಸಿದ್ದರು. ಆದ್ರೆ ಬಾಲಸುಬ್ರಹ್ಮಣ್ಯಂ ಅವರಿಗೆ ಆಗಿನ್ನೂ ಚಿಕ್ಕ ವಯಸ್ಸಾಗಿದ್ದ ಕಾರಣ, ನಿರ್ದೇಶಕರು ಶಿಕ್ಷಣ ಮುಗಿಸಿಕೊಂಡು ಬಾ ಎಂದು ಹೇಳಿ ವಾಪಸ್ ಕಳುಹಿಸಿದ್ದರು.
ಮುಂದೆ ಶಿಕ್ಷಣ ಮುಗಿಸಿದ ಬಾಲಸುಬ್ರಹ್ಮಣ್ಯಂ ಸಂಗೀತ ಸಾಧನೆ ಮುಂದುವರಿಸಿದರು. 1966 ಆಗಸ್ಟ್ ತಿಂಗಳಿನಲ್ಲಿ ಅವರಿಗೆ ಮೊಟ್ಟ ಮೊದಲ ಬಾರಿಗೆ ಹಿನ್ನೆಲೆ ಗಾಯಕನಾಗಿ ಹಾಡಲು ಅವಕಾಶ ದೊರೆಯಿತು. ಕೊನೆಗೆ ಜಾನಕಮ್ಮನವರ ಜೊತೆಯೇ ಎಸ್ ಪಿಬಿ ನೂರಾರು ಹಾಡುಗಳನ್ನು ಹಾಡಿದರು.
ಅಂದಹಾಗೆ ಗಾಯಕಿ ಎಸ್.ಜಾನಕಮ್ಮ ಅವರೇ ಬಾಲಸುಬ್ರಹ್ಮಣ್ಯಂ ಎಂಬ ನನ್ನ ಹೆಸರನ್ನು ಬಾಲು ಎಂದು ಮಾಡಿದರು. ನಾನು ಪ್ಲೇ ಬ್ಯಾಕ್ ಸಿಂಗರ್ ಆಗಿ ಮೊದಲ ಹೆಜ್ಜೆಯಿಡಲೂ ಜಾನಕಮ್ಮ ಕಾರಣ. ಅವರಿಂದಲೇ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಬಾಲಸುಬ್ರಹ್ಮಣ್ಯಂ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ.