ಬಿ.ವೈ ವಿಜಯೇಂದ್ರ… ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸುಪುತ್ರ. ಸದ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷ. ಆದ್ರೆ ವಿಜಯೇಂದ್ರ ಮೇಲೆ ಸತತವಾಗಿ ಆರೋಪಗಳು ಕೇಳಿಬರುತ್ತಿವೆ. ಯಾಕೆ ? ಸೂಪರ್ ಸಿಎಂ, ಭ್ರಷ್ಟಚಾರ ಆರೋಪ ಹೀಗೆ ವಿಜಯೇಂದ್ರ ಅವರ ರಾಜಕೀಯ ಜೀವನದ ಮೇಲೆ ಒಂದಲ್ಲ ಒಂದು ಆರೋಪಗಳು ಕೇಳಿಬರುತ್ತನೇ ಇವೆ.
ಹಾಗೇ ನೋಡಿದ್ರೆ ಚಾಣಕ್ಯ ರಾಜಕಾರಣಿಯಾಗುವ ಎಲ್ಲಾ ಅರ್ಹತೆಗಳು ಅವರಲ್ಲಿವೆ. ಸೈಲೆಂಟ್ ಆಗಿಯೇ ರಾಜಕಾರಣದ ವ್ಯೂಹ ರಚಿಸುವ ಬುದ್ಧಿವಂತಿಕೆ ಅವರಲ್ಲಿದೆ. ಬಿಎಸ್‍ವೈ ಅವರ ಪ್ರಭಾವದ ಜೊತೆಗೆ ತನ್ನ ದೃಢವಾದ ನಿಲುವುಗಳಿಂದಲೇ ವಿಜಯೇಂದ್ರ ಅವರು ರಾಜ್ಯ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.
ಆದ್ರೆ ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವ ಮನಸ್ಸು ಮಾಡಿದ್ದರು. ಅದೂ ಕೂಡ ಮಾಜಿ ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರದಿಂದಲೇ ತನ್ನ ರಾಜಕೀಯ ಭವಿಷ್ಯವನ್ನು ಶುರು ಮಾಡಬೇಕು ಎಂದು ಕನಸು ಕಂಡಿದ್ದರು. ವರುಣಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುವ ಮನಸ್ಸು ಮಾಡಿದ್ದಾಗ ಸ್ವಪಕ್ಷೀಯರೇ ಅಡ್ಡಗಾಲು ಹಾಕಿದ್ದರು. ಆದ್ರೂ ತಲೆಕೆಡಿಸಿಕೊಳ್ಳದ ವಿಜಯೇಂದ್ರ ಪಕ್ಷದ ಗೆಲುವಿಗಾಗಿ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದರು.
ನಂತರ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಲು ವಿಜಯೇಂದ್ರ ಅವರ ಕೊಡುಗೆ ಕೂಡ ಅಪಾರವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಸೆಳೆದುಕೊಳ್ಳಲು ತೆರೆಮರೆಯಲ್ಲಿ ವಿಜಯೇಂದ್ರ ಕೂಡ ಕೆಲಸ ಮಾಡಿದ್ದರು. ಆ ಬಳಿಕ ಉಪ ಚುನಾವಣೆಯಲ್ಲಿ ಕೆ.ಆರ್. ಪೇಟೆಯಿಂದ ನಾರಾಯಣ ಗೌಡರನ್ನು ಗೆಲ್ಲಿಸಿದ್ದು ವಿಜಯೇಂದ್ರ ಅವರ ಮಾಸ್ಟರ್ ಪ್ಲಾನ್ ನಿಂದಲೇ ಎಂಬುದನ್ನು ಮರೆಯುವ ಹಾಗಿಲ್ಲ.
ಆದ್ರೂ ರಾಜ್ಯ ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ ಅವರನ್ನು ಕಂಡ್ರೆ ಅಷ್ಟಕ್ಕಷ್ಟೇ. ಮಗನ ರಾಜಕೀಯ ಭವಿಷ್ಯಕ್ಕೆ ಸಿಎಂ ಬಿಎಸ್‍ವೈ ಸಾಥ್ ನೀಡಿದ್ರೂ ಅದು ಅಂದುಕೊಂಡಂತೆ ನಡೆಯುತ್ತಿಲ್ಲ. ವಿರೋಧ ಪಕ್ಷಗಳಿಗಿಂತ ತಮ್ಮ ಪಕ್ಷದೊಳಗೆ ಇರುವಂತಹ ವಿರೋಧಿಗಳೇ ಬಿಎಸ್‍ವೈ ಮತ್ತು ವಿಜಯೇಂದ್ರ ಅವರಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ.
ವಿಜಯೇಂದ್ರ ಯಾಕೆ ರಾಜಕಾರಣಕ್ಕೆ ಬರಬಾರದಾ?
ಅಪ್ಪ ಬಿಎಸ್‍ವೈ ಹುಟ್ಟು ಹೋರಾಟಗಾರ. ಹೋರಾಟದಿಂದ ಬೆಳೆದು ಬಂದಿರುವ ಬಿಎಸ್‍ವೈ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆಗೆ ನೀಡಿರುವಂತಹ ಕೊಡುಗೆ ಅನನ್ಯ. ಇದನ್ನು ಯಾರೂ ಕೂಡ ಪ್ರಶ್ನೆ ಮಾಡುವಂಗಿಲ್ಲ. ಪಕ್ಷವನ್ನು ತಳಮಟ್ಟದಿಂದ ಬೆಳೆಸಿರುವ ಬಿಎಸ್‍ವೈ, ಮೊದಲ ಬಾರಿ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಅರಳುವಂತೆ ಮಾಡಿದ್ದರು. ಇದೀಗ ಎಲ್ಲರೂ ಬಿಜೆಪಿಗೆ ಜೈ ಅನ್ನಬಹುದು. ಮೋದಿ ಪ್ರಭಾವದಿಂದ ರಾಜ್ಯದಲ್ಲಿ ಕೇಸರಿಮಯವಾಗಿದೆ. ಆದ್ರೆ ಮೋದಿ ಪ್ರಭಾವ ಬರುವುದಕ್ಕಿಂತ ಮುಂಚೆ ರಾಜ್ಯದಲ್ಲಿ ಬಿಎಸ್‍ವೈ ಹವಾ ಇತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಮೊದಲ ಬಾರಿ ಜೆಡಿಎಸ್ ಜೊತೆ ಸೇರಿಕೊಂಡು ಬಿಜೆಪಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಿತ್ತು. ಆದ್ರೆ ಎಚ್.ಡಿ.ಕೆ. ಅಧಿಕಾರ ಹಸ್ತಾಂತರ ಮಾಡದ ಕಾರಣ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಆಪರೇಷನ್ ಕಮಲದ ಮೂಲಕ ಬಿಎಸ್‍ವೈ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ. ಅದೇ ರೀತಿ ಭ್ರಷ್ಟಚಾರದ ಆರೋಪದ ಮೇಲೆ ಅಧಿಕಾರವನ್ನು ಕಳೆದುಕೊಂಡ ಬಿಎಸ್‍ವೈ ಆನಂತರ ಕೆಜೆಪಿ ಪಕ್ಷವನ್ನು ಕಟ್ಟಿ ತಾನೇ ಬೆಳೆಸಿದ್ದ ಬಿಜೆಪಿ ಪಕ್ಷಕ್ಕೆ ಸಡ್ಡು ಹೊಡೆದಿದ್ದರು. ಪರಿಣಾಮ ಸಿದ್ದಾರಾಮಯ್ಯನವರ ಮುಖ್ಯಮಂತ್ರಿಯಾಗುವ ಕನಸು ಕೂಡ ಈಡೇರಿತ್ತು.
ನಂತರ ಬದಲಾದ ರಾಷ್ಟ್ರ ರಾಜಕಾರಣದಿಂದ ಬಿಎಸ್‍ವೈ ಮತ್ತೆ ಬಿಜೆಪಿಗೆ ಬಂದ್ರು. ಮತ್ತೊಮ್ಮೆ ಪಕ್ಷವನ್ನು ಕಟ್ಟಲು ಪ್ರಯತ್ನಿಸಿದ್ರು. ಹೀಗಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಶಾಸಕರನ್ನು ಹೊಂದಿದ್ರೂ ಗದ್ದುಗೆಗೆ ಏರಲು ಸಂಖ್ಯಾಬಲದ ಕೊರತೆ ಎದುರಿಸಿತ್ತು. ಇನ್ನೊಂದೆಡೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಎಚ್‍ಡಿಕೆ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಪಡೆದುಕೊಂಡ್ರು.
ಸುಮಾರು 13-14 ತಿಂಗಳ ಬಳಿಕ ಮತ್ತೆ ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿತ್ತು. ಎಚ್‍ಡಿಕೆಯ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಹಲವು ಪ್ರಯತ್ನಗಳನ್ನು ಮಾಡಿತ್ತು. ಈ ಎಲ್ಲಾ ಪ್ರಯತ್ನಗಳ ಹಿಂದೆ ವಿಜಯೇಂದ್ರ ಅವರ ಕೈವಾಡವಿತ್ತು. ಕೊನೆಗೂ ಬಿಎಸ್‍ವೈ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಬಿಎಸ್‍ವೈ ಮುಖ್ಯಮಂತ್ರಿಯಾದ ನಂತರ ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು. ಉತ್ತರ ಕರ್ನಾಟಕ ಮತ್ತು ಕೊಡಗು, ಚಿಕ್ಕಮಗಳೂರಿನಲ್ಲಿ ನೆರೆ ಬಂದು ಅಲ್ಲೋಲಕಲ್ಲೋಲವನ್ನೇ ಉಂಟು ಮಾಡಿತ್ತು. ಇನ್ನೊಂದೆಡೆ ಮಂತ್ರಿ ಮಂಡಲ ವಿಸ್ತರಣೆ, ಪಕ್ಷದೊಳಗಿನ ಭಿನ್ನಮತ, ಇದೀಗ ಕೊರೋನಾ, ಡಿಜೆಹಳ್ಳಿ ಕೆಜಿಹಳ್ಳಿ ಗಲಾಟೆ, ಮತ್ತೆ ಪ್ರವಾಹ, ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಅದರ ಜೊತೆ ಪುತ್ರ ವಿಜಯೇಂದ್ರರ ಮೇಲೆ ಭ್ರಷ್ಟಚಾರದ ಆರೋಪ.. ಹೀಗೆ ಸಿಎಂ ಬಿಎಸ್‍ವೈ ಸವಾಲುಗಳು, ಪ್ರತಿಪಕ್ಷಗಳ ಆರೋಪ, ಪಕ್ಷದೊಳಗಿನ ಬಿಕ್ಕಟ್ಟು, ಬಿಜೆಪಿ ಹೈಕಮಾಂದ್ ಒತ್ತಡ, ರಾಜ್ಯದ ಬೊಕ್ಕಸ ಖಾಲಿಯಾಗುತ್ತಿರುವುದು ಹೀಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಆದ್ರೆ ವಿಜಯೇಂದ್ರ ಮೇಲೆ ಎದುರಾಳಿಗಳಿಗೆ ಇಷ್ಟೊಂದು ದ್ವೇಷ.. ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಕುತ್ತು ತರುವ ಪ್ರಯತ್ನ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಪಕ್ಷದೊಳಗೆ ನಡೆಯುತ್ತಿದೆ ಎಂಬುದು ಗುಟ್ಟಾಗಿ ಏನು ಉಳಿದಿಲ್ಲ. ಪಕ್ಷದಲ್ಲಿ ಕುಟುಂಬ ರಾಜಕಾರಣ ಇರಬಾರದು ಎಂಬುದೇನೋ ನಿಜ. ಹಾಗಂತ ವಿಜಯೇಂದ್ರ ರಾಜಕಾರಣಕ್ಕೆ ಬರಬಾರದು ಅಂತ ಏನು ಇಲ್ಲ. ಸ್ವಪ್ರಯತ್ನದಿಂದ ರಾಜಕೀಯದಲ್ಲಿ ಬೆಳೆಯಬೇಕು. ಹುಟ್ಟಿನಿಂದಲೇ ತಂದೆಯ ಬೆಳವಣಿಗೆಯನ್ನು ಕಂಡಿರುವ ವಿಜಯೇಂದ್ರ ಕೂಡ ತಂದೆಯಂತೆ ತಾನು ಕೂಡ ರಾಜಕಾರಣಿಯಾಗಬೇಕು ಅನ್ನೋ ಹಂಬಲವಂತೂ ಇದ್ದೇ ಇರುತ್ತೆ. ಆದ್ರೆ ವಿಜಯೇಂದ್ರ ಅವರು ಯಾವ ರೀತಿ ಬಳಸಿಕೊಳ್ಳುತ್ತಾರೆ ಅನ್ನೋದು ಮುಖ್ಯವಾಗಿರುತ್ತೆ.
ಒಂದಂತೂ ನಿಜ. ಯಾರು ಏನೇ ಬೇಕಾದ್ರೂ ಹೇಳಲಿ. ಅಧಿಕಾರ, ಪ್ರಭಾವ ಇದ್ದಾಗಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಇಲ್ಲ ಅಂದ್ರೆ ಮೂಲೆಗುಂಪಾಗೋದು ಖಚಿತ. ಸಿಎಂ ಬಿಎಸ್‍ವೈ ಅಧಿಕಾರದಲ್ಲಿ ಇದ್ದಾಗಲೇ ವಿಜಯೇಂದ್ರ ಅವರು ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು. ಇಲ್ಲ ಅಂದ್ರೆ ಅವರು ಸೈಡ್ ಲೈನ್ ಆಗೋದರಲ್ಲಿ ಎರಡು ಮಾತಿಲ್ಲ. ಅದ್ರಲ್ಲೂ ಬಿಜೆಪಿ ಪಕ್ಷದಲ್ಲಿ ತುಂಬಾನೇ ಎಚ್ಚರದಿಂದರಬೇಕಾಗುತ್ತೆ. ಯಾಕಂದ್ರೆ ಬಿಜೆಪಿಯ ಅತಿರಥ -ಮಹಾರಥ ರಾಜಕಾರಣಿಗಳೇ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿದ್ದಾರೆ.
ಹಾಗೇ ಬಿಎಸ್‍ವೈ ಅಧಿಕಾರ ಕಳೆದುಕೊಂಡ ನಂತರ ಅವರನ್ನು ಕೇಳುವವರೇ ಇರಲ್ಲ. ಇದು ಬಿಜೆಪಿಯಲ್ಲಿನ ಸದ್ಯದ ಸಿದ್ಧಾಂತ. ದೇಶದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಲಾಲ್ ಕೃಷ್ಣ ಅಡ್ವಾಣಿಯವರೇ ಸುಮ್ಮನಾಗಿದ್ದಾರೆ. ಇನ್ನು ಬಿಎಸ್‍ವೈ ಹಾದಿ ಅದೇ ರೀತಿಯಲ್ಲಿರುತ್ತದೆ. ಹೀಗಾಗಿಯೇ ವಿಜಯೇಂದ್ರ ಅವರು ರಾಜ್ಯ ರಾಜಕೀಯದಲ್ಲಿ ತನ್ನ ಪ್ರಭಾವವನ್ನು ಬೆಳೆಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಇದಕ್ಕೆ ಸ್ವಪಕ್ಷೀಯರೇ ಅಡ್ಡಿಯಾಗುತ್ತಿದ್ದಾರೆ. ಹೀಗೊಂದು ತರ್ಕ ರಾಜ್ಯದ ರಾಜಕೀಯ ಚಿಂತಕರ ಚಾವಡಿಯಲ್ಲಿದೆ. ನೋಡೋಣ ಭವಿಷ್ಯದಲ್ಲಿ ಇದು ಯಾವ ಮಗ್ಗುಲಿಗೆ ಹೊರಳುತ್ತದೋ!