ಯಾವ ಕೇಸಿಗೂ ಹೆದರಲ್ಲ ಎಂದು  ಡಿ.ಕೆ ಶಿವಕುಮಾರ್ ಹೇಳಿದ್ದೇಕೆ ?

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರನ್ನು ಜೀವಂತ ಸುಡುತ್ತಿದೆ. ಕೇಂದ್ರ ಸರ್ಕಾರದಿಂದ ಜನರನ್ನು ರಕ್ಷಿಸಲು ನಾವು ಇಂದು ಹೋರಾಟ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದರು.

ಇಂಧನ ಬೆಲೆ ಏರಿಕೆ ವಿರೋಧಿಸಿ ಇಂದು ಕಾಂಗ್ರೆಸ್ ಸೈಕಲ್ ಜಾಥ ನಡೆಸಿ ಪ್ರತಿಭಟನೆ ನಡೆಸಿತು. ಡಿ.ಕೆ ಶಿವಕುಮಾರ್ ತಮ್ಮ ಸದಾಶಿವನಗರ ನಿವಾಸದಿಂದ ಸೈಕಲ್ ಮೂಲಕ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ನಂತರ ಕೆಪಿಸಿಸಿ ಕಚೇರಿಯಿಂದ ಜಿಪಿಓ ಮಾರ್ಗವಾಗಿ ಮೀನ್ಸ್ ಸ್ಕ್ವೇರ್ ವೃತ್ತದ ಆದಾಯ ತೆರಿಗೆ ಕಛೇರಿವರೆಗೂ ತೆರಳಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನಿರ್ಧಾರವನ್ನು ಖಂಡಿಸಿದರು. ಈ ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ಹಾಗೂ ಅನೇಕ ನಾಯಕರು ಇದ್ದರು.

ಪ್ರತಿಭಟನಾ ವೇಳೆಯಲ್ಲಿ ಮಾತನಾಡಿದ ಅವರು, ದೇಶದ ಸಾಮಾನ್ಯ ಜನರು, ರೈತರನ್ನು ರಕ್ಷಿಸಲು ನಡೆಸುತ್ತಿರುವ ಹೋರಾಟ. ಅಧಿಕಾರ ಬರುತ್ತದೆ ಹೋಗುತ್ತದೆ. ಕಾಂಗ್ರೆಸ್ ಗೆ ಅಧಿಕಾರಕ್ಕಿಂತ ಜನರ ಹಿತ ಮುಖ್ಯ. ಈಗಷ್ಟೇ ಖರ್ಗೆ ಸಾಹೇಬರು ಇಂದು ಮಾತು ಹೇಳಿದರು. ಸ್ವಾತಂತ್ರ್ಯ ಬಂದ ನಂತರ ಡೀಸೆಲ್ ಬೆಲೆಗಿಂತ ಪೆಟ್ರೋಲ್ ಬೆಲೆ ಸುಮಾರು ಶೇ.30 ರಷ್ಟು ಹೆಚ್ಚಿನ ಅಂತರ ಇರುತ್ತಿತ್ತು. ಆದರೆ ಈಗ ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇತಿಹಾಸ ಬರೆದಿದ್ದಾರೆ.

ಸಾಮಾನ್ಯ ವ್ಯಕ್ತಿ ಪ್ರತಿ ಬಾರಿ ಸಾರಿಗೆ ಮೂಲಕ ಪ್ರಯಾಣ ಮಾಡುವಾಗಲೂ ಕೇಂದ್ರ ಸರ್ಕಾರ ಅವನ ರಕ್ತ ಹೀರುತ್ತಿದೆ. ಕೇಂದ್ರ ಸರ್ಕಾರ ಕಳೆದ 6 ವರ್ಷಗಳಲ್ಲಿ ಇಂಧನ ಮೇಲಿನ ತೆರಿಗೆ ಹೆಚ್ಚಳದಿಂದ 18 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ. ಸದ್ಯ ದೇಶದಲ್ಲಿ ಕೋವಿಡ್ ಪಿಡುಗಿನಿಂದ ಜನರು ನರಳುತ್ತಿದ್ದು, ಈ ಸಂದರ್ಭದಲ್ಲಿ ಸರ್ಕಾರ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಹಣ ನೀಡಿಲ್ಲ ಅಂತಾ ಹೆಣವನ್ನೇ ನೀಡುತ್ತಿಲ್ಲ. ಪ್ರಧಾನಿ ಮೋದಿ ಅವರೇ, ಸಿಎಂ ಯಡಿಯೂರಪ್ಪನವರೇ ನಿಮಗೆ ಕಣ್ಣು, ಕಿವಿ ಹಾಗೂ ಹೃದಯವೇ ಇಲ್ಲವಲ್ಲ. ನಮ್ಮ ಈ ಕೂಗೂ ದೆಹಲಿ ತಲುಪಬೇಕು ಅಂತಾ ತೆರೆಗೆ ಕಟ್ಟಡದ ಮುಂದೆ ಪ್ರತಿಭಟನೆ ಮಾಡುತ್ತಿದ್ದೇವೆ.

ಈ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡಲಿಲ್ಲ. ಜನರ ಪರ ಧ್ವನಿ ಎತ್ತಲು ನಿಮ್ಮ ಅನುಮತಿ ಬೇಡ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಇತಿಹಾಸ ಹಾಗೂ ಜನರು ಕೊಟ್ಟಿರುವ ಶಕ್ತಿ ಸಾಕು ನಾವು ಹೋರಾಟ ಮಾಡುತ್ತೇವೆ.

ಈ ಹೋರಾಟ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತದೆ. ಮುಂದಿನ ತಿಂಗಳು 4ರಿಂದ 7ರವರೆಗೆ ಪ್ರತಿ ತಾಲೂಕು ಹಾಗೂ ಬ್ಲಾಕ್ ಮಟ್ಟದಲ್ಲಿ ಈ ಹೋರಾಟ ನಡೆಸಲಾಗುವುದು. ಜನ ಸಾಮಾನ್ಯರ ಸಮಸ್ಯೆಗಳನ್ನು ರಾಷ್ಟ್ರಪತಿಗಳಿಗೆ ತಲುಪಿಸಲು ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.

2014ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರತಿ ಬ್ಯಾರೆಲ್ ಕಚ್ಚಾ ತೈಲ 102 ಡಾಲರ್ ಇತ್ತು. ಆಗ ದೇಶದಲ್ಲಿ ಪೆಟ್ರೋಲ್ 61 ಹಾಗೂ ಡೀಸೆಲ್ 46 ರೂಪಾಯಿ ಇತ್ತು. ಈಗ ಪ್ರತಿ ಬ್ಯಾರೆಲ್ ಕಚ್ಚಾ ತೈಲ 42 ಡಾಲರ್ ಇದೆ. ಈಗ ದೇಶದಲ್ಲಿ ಪೆಟ್ರೋಲ್ 84 ಹಾಗೂ ಡೀಸೆಲ್ 80 ರೂಪಾಯಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಹೇಳಿದ್ದ ಅಚ್ಛೇ ದಿನ್ ಇದೇನಾ? ಹೀಗೆ ಬೆಲೆ ಏರಿಕೆ ಮಾಡಿ ಜನರನ್ನು ಜೀವಂತವಾಗಿ ಸಾಯಿಸುತ್ತಿದ್ದೀರಿ. ನಿಮ್ಮ ಈ ಕ್ರೂರ ನಿರ್ಧಾರ ವಿರುದ್ಧ ಜನ ದಂಗೆ ಎದ್ದು ನಿಮ್ಮನ್ನ ಅಧಿಕಾರದಿಂದ ಕೆಳಗೆ ಇಳಿಸುತ್ತಾರೆ ನೆನಪಿರಲಿ.

 ಯಾವ ಕೇಸಿಗೂ ಹೆದರಲ್ಲ:

ಜನರ ಧ್ವನಿಯಾಗುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ.  ಯುಪಿಎ ಸರ್ಕಾರ ಸ್ವಲ್ಪ ಬೆಲೆ ಹೆಚ್ಚಿಸಿದಾಗ ಯಾರು ಏನು ಹೇಳಿದ್ದರು ಎಂಬುದನ್ನು ತಿರುಗಿ ನೋಡಲಿ. ಮೋದಿ ಅವರು ಗುಜರಾತಿನ ಸಿಎಂ ಏನೆಲ್ಲಾ ಹೇಳಿದ್ದರು ನೋಡಿ.

ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಹೆಚ್ಚಾಗಿದ್ದು, ಇದರ ವಿರುದ್ಧ ಹೋರಾಟ ಮಾಡಬೇಕು. ಪೊಲೀಸ್ ಅಧಿಕಾರಿಗಳು ನಮ್ಮ ವಿರುದ್ಧ ಯಾವ ಕೇಸ್ ಬೇಕಾದರೂ ಹಾಕಿಕೊಳ್ಳಲಿ. ಯಾವ ಕಚೇರಿಯಲ್ಲಿ ಏನು ನಡೆಯುತ್ತಿದೆ ಅಂತಾ ನಮಗೆ ಗೊತ್ತಿದೆ. ಸಮಯ ಬಂದಾಗ ಹೇಳುತ್ತೇನೆ. ಸರ್ಕಾರ ಸಾಮಾನ್ಯ ಜನರ ಬದುಕಿನಲ್ಲೂ ಚೆಲ್ಲಾಟವಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡುತ್ತಿದ್ದು, ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This