ಕಪಿಲ್ ದೇವ್, ಮನೋಜ್ ಪ್ರಭಾಕರ್ ನಂತಹ ಆಲ್ ರೌಂಡರ್ ಗಳು ಟೀಮ್ ಇಂಡಿಯಾಗೆ ಇನ್ನೂ ಸಿಕ್ಕಿಲ್ಲ ಯಾಕೆ ?
ಟೀಮ್ ಇಂಡಿಯಾಗೆ ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಮಾಡುವಂತಹ ಆಲ್ ರೌಂಡರ್ ನ ಕೊರತೆ ಕಾಡುತ್ತಿದೆಯಾ ?
ಈ ಪ್ರಶ್ನೆಗೆ ಹಂಡ್ರೆಡ್ ಪರ್ಸೆಂಟ್ ಉತ್ತರ ಹೌದು. ತಂಡದ ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಕೆಳಕ್ರಮಾಂಕದಲ್ಲಿ ಆಧಾರವಾಗಿ ನಿಲ್ಲುವಂತಹ ಆಲ್ ರೌಂಡರ್ ಸದ್ಯದ ಟೀಮ್ ಇಂಡಿಯಾದಲ್ಲಿ ಇಲ್ಲ.
ಎರಡು ಮೂರು ದಶಕಗಳ ಹಿಂದೆ ಕಪಿಲ್ ದೇವ್, ಚೇತನ್ ಶರ್ಮಾ, ನಂತರ ಮನೋಜ್ ಪ್ರಭಾಕರ್ ತಂಡಕ್ಕೆ ಬೌಲಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ತಂಡಕ್ಕೆ ಆಧಾರವಾಗಿ ನಿಂತು ಆಡುತ್ತಿದ್ದರು.
ಇನ್ನು ಭಾರತ ಕ್ರಿಕೆಟ್ ತಂಡದ ಎವರ್ ಗ್ರೀನ್ ಹೀರೋ ಕಪಿಲ್ ದೇವ್. ಇಂತಹ ಆಲ್ ರೌಂಡರ್ ಆಟಗಾರ ಟೀಮ್ ಇಂಡಿಯಾಗೆ ಇನ್ನೂ ಸಿಕ್ಕಿಲ್ಲ. ಬಹುಶಃ ಸಿಗೋದು ಇಲ್ಲ.. 131 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಪಿಲ್, 5248 ರನ್ ದಾಖಲಿಸಿದ್ದಾರೆ. ಎಂಟು ಶತಕ ಹಾಗೂ 27 ಅರ್ಧಶತಕಗಳನ್ನು ದಾಖಲಿಸಿದ್ದಾರೆ. 434 ಟೆಸ್ಟ್ ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಚೇತನ್ ಶರ್ಮಾ – ಚೇತನ್ ಶರ್ಮಾ ಆಡಿರುವ 23 ಟೆಸ್ಟ್ ಪಂದ್ಯಗಳಲ್ಲಿ 396 ರನ್ ಹಾಗೂ 61 ವಿಕೆಟ್ ಗಳನ್ನು ಪಡೆದುಕೊಂಡಿದ್ದರು.
ಮನೋಜ್ ಪ್ರಭಾಕರ್. ಭಾರತ ಕ್ರಿಕೆಟ್ ತಂಡದ ಸ್ಟೈಲೀಶ್ ಬೌಲರ್. ವೇಗದ ಬೌಲಿಂಗ್ ಜೊತೆ ತಂಡಕ್ಕೆ ಬ್ಯಾಟಿಂಗ್ ನಲ್ಲೂ ಆಧಾರವಾಗಿರುತ್ತಿದ್ದರು. 39 ಟೆಸ್ಟ್ ಪಂದ್ಯಗಳಲ್ಲಿ 1600 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 9 ಅರ್ಧಶತಕಗಳಿವೆ. ಹಾಗೇ 96 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಇನ್ನು 2003ರಿಂದ 2008ರವರೆಗೆ ಇರ್ಫಾನ್ ಪಠಾಣ್ ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಮಿಂಚು ಹರಿಸುತ್ತಿದ್ದರು. ಆದ್ರೆ ಇರ್ಫಾನ್ ಪಠಾಣ್ ಹೆಚ್ಚು ವರ್ಷ ಟೀಮ್ ಇಂಡಿಯಾದಲ್ಲಿ ಆಡಿಲ್ಲ. ಇಲ್ಲಿ ಆಡಿಲ್ಲ ಅನ್ನುವುದಕ್ಕಿಂತ ಹೆಚ್ಚಾಗಿ ಅವಕಾಶ ಸಿಕ್ಕಿಲ್ಲ ಅಂತನೇ ಹೇಳಬಹುದು. ಜೊತೆಗೆ ಸ್ವಲ್ಪ ಮಟ್ಟಿಗೆ ಫಾರ್ಮ್ ಕೂಡ ಕೈಕೊಟ್ಟಿತ್ತು. ಇರ್ಫಾನ್ ಪಠಾಣ್, 29 ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಹಾಗೂ ಆರು ಅರ್ಧಶತಕಗಳ ಸಹಾಯದಿಂದ 1105 ರನ್ ದಾಖಲಿಸಿದ್ದಾರೆ. 100 ವಿಕೆಟ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.
ಆದಾದ ನಂತರ ಟೀಮ್ ಇಂಡಿಯಾಗೆ ಕಪಿಲ್ ದೇವ್, ಮನೋಜ್ ಪ್ರಭಾಕರ್, ಚೇತನ್ ಶರ್ಮಾ, ಇರ್ಫಾನ್ ಪಠಾಣ್ ನಂತಹ ಆಲ್ ರೌಂಡರ್ ಗಳು ಸಿಕ್ಕಿಲ್ಲ. ಹಾರ್ದಿಕ್ ಪಾಂಡ್ಯ ಭರವಸೆ ಮೂಡಿಸಿದ್ರೂ ಆಯ್ಕೆಗಾರರು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಲ್ಲ.
ಹಾರ್ದಿಕ್ ಪಾಂಡ್ಯ 2017ರಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. 2018ರ ಇಂಗ್ಲೆಂಡ್ ಸರಣಿಯ ಬಳಿಕ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. 11 ಟೆಸ್ಟ್ ಪಂದ್ಯಗಳಲ್ಲಿ 532 ರನ್ ಹಾಗೂ 17 ವಿಕೆಟ್ ಗಳನ್ನು ಕಬಳಿಸಿದ್ದರು.
90ರ ದಶಕದ ಅಂತ್ಯದಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ರಾಬಿನ್ ಸಿಂಗ್ ಕೂಡ ಆಲ್ ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದರು. ಆದ್ರೆ ರಾಬಿನ್ ಸಿಂಗ್ ಏಕದಿನ ಕ್ರಿಕೆಟ್ ಗೆ ಮಾತ್ರ ಸೀಮಿತವಾಗಿದ್ದರು. ಅವರು ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಆಡಿದ್ದರು. ಇದೀಗ ರಾಬಿನ್ ಸಿಂಗ್ ಅವರಂತೆ ಹಾರ್ದಿಕ್ ಪಾಂಡ್ಯ ಅವರನ್ನು ಕೂಡ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಬದಲಾಗಿ ಏಕದಿನ ಮತ್ತು ಟಿ-ಟ್ವೆಂಟಿ ತಂಡಕ್ಕೆ ಮಾತ್ರ ಪರಿಗಣಿಸಲಾಗುತ್ತಿದೆ.
ಸದ್ಯ ಟೀಮ್ ಇಂಡಿಯಾದಲ್ಲಿ ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಮಾಡುವ ಆಲ್ ರೌಂಡರ್ ಆಗಿ ಶಾರ್ದೂಲ್ ಥಾಕೂರ್ ಭರವಸೆ ಮೂಡಿಸಿದ್ದಾರೆ. ಶಾರ್ದೂಲ್ ಥಾಕೂರ್ 2 ಟೆಸ್ಟ್ ಪಂದ್ಯಗಳ ಮೂರು ಇನಿಂಗ್ಸ್ ಗಳಲ್ಲಿ ಆಡಿದ್ದು, ಏಳು ವಿಕೆಟ್ ಹಾಗೂ 73 ರನ್ ಗಳಿಸಿದ್ದಾರೆ.
ಇನ್ನುಳಿದಂತೆ ಟೀಮ್ ಇಂಡಿಯಾದ ವೇಗಿಗಳು ತಂಡಕ್ಕೆ ಕೆಳಕ್ರಮಾಂಕದಲ್ಲಿ ಆಧಾರವಾಗುತ್ತಿಲ್ಲ. ಇಶಾಂತ್ ಶರ್ಮಾ, ಮಹಮ್ಮದ್ ಶಮಿ ಹಾಗೂ ಜಸ್ಪ್ರಿತ್ ಬೂಮ್ರಾ ಬೌಲಿಂಗ್ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಸಮಯೋಚಿತವಾಗಿ ಆಡುವಂತಹ ಗುಣಮಟ್ಟದ ಬ್ಯಾಟಿಂಗ್ ಕಲೆ ಅವರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮೆನ್ ಗಳನ್ನೇ ಅವಲಂಬಿತವಾಗಬೇಕಾಗುತ್ತದೆ.
ಇಶಾಂತ್ ಶರ್ಮಾ 102 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 751 ರನ್ ಹಾಗೂ 306 ವಿಕೆಟ್ ಗಳನ್ನು ಪಡೆದಿದ್ದಾರೆ.ಗರಿಷ್ಠ ರನ್ ಅಂದ್ರೆ 57. ಒಂದೇ ಒಂದು ಅರ್ಧಶತಕ ದಾಖಲಿಸಿದ್ದಾರೆ.
ಇನ್ನು ಮಹಮ್ಮದ್ ಶಮಿ. 51 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 515 ರನ್ ಕಲೆ ಹಾಕಿದ್ದಾರೆ. ಒಂದು ಅರ್ಧಶತಕ ಸಿಡಿಸಿದ್ದಾರೆ. ಜೊತೆಗೆ 184 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಜಸ್ಪ್ರಿತ್ ಬೂಮ್ರಾ. ಆಡಿದ್ದು 20 ಟೆಸ್ಟ್ ಪಂದ್ಯಗಳನ್ನು. ದಾಖಲಿಸಿರುವ ರನ್‍ಗಳು ಕೇವಲ 43. ಗರಿಷ್ಠ ರನ್ ಅಂದ್ರೆ 10 ರನ್ ಮಾತ್ರ. ಆದ್ರೆ 83 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಉಮೇಶ್ ಯಾದವ್.. 48 ಟೆಸ್ಟ್ ಪಂದ್ಯಗಳನ್ನು ಆಡಿರುವ ಉಮೇಶ್ ಯಾದವ್ ದಾಖಲಿಸಿದ್ದ ರನ್ 359. ಗರಿಷ್ಠ 31 ರನ್. ಜೊತೆಗೆ 148 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಭುವನೇಶ್ವರ್ ಕುಮಾರ್- 21 ಟೆಸ್ಟ್ ಪಂದ್ಯಗಳನ್ನು ಆಡಿರುವ ಭುವಿ 552 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ ಮೂರು ಅರ್ಧಶತಕಗಳಿವೆ. 63 ಗರಿಷ್ಠ ರನ್. ಜೊತೆಗೆ 63 ವಿಕೆಟ್ ಗಳನ್ನು ಪಡೆದಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಸ್ಪಿನ್ ಬೌಲಿಂಗ್ ಜೊತೆ ಬ್ಯಾಟಿಂಗ್ ಮಾಡುವಂತಹ ಆಟಗಾರರು ಸಿಗುತ್ತಿದ್ದಾರೆ. ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಆರ್. ಅಶ್ವಿನ್ ನಂತಹ ಆಟಗಾರರು ಇದ್ದಾರೆ. ಆದ್ರೆ ಇದೇ ರೀತಿ ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಮಾಡುವಂತಹ ಆಲ್ ರೌಂಡರ್‍ಗಳ ಕೊರತೆ ಟೀಮ್ ಇಂಡಿಯಾಗೆ ಕಾಡುತ್ತಿದೆ.
ಹಾಗಂತ ಈ ಸಮಸ್ಯೆ ಭಾರತಕ್ಕೆ ಕಾಡುತ್ತಿರುವುದು ಇದೇನೂ ಮೊದಲಲ್ಲ. ಕಪಿಲ್ ದೇವ್, ಮನೋಜ್ ಪ್ರಭಾಕರ್ ನಂತರ ಅವರಂತಹ ಆಲ್ ರೌಂಡರ್ ಗಳನ್ನು ತಯಾರು ಮಾಡಲು ಬಿಸಿಸಿಐಗೆ ಸಾಧ್ಯವಾಗಿಲ್ಲ.
ಒಟ್ಟಿನಲ್ಲಿ ತಂಡ ಗೆಲುವಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾಗ ತಂಡದಲ್ಲಿರುವ ತಪ್ಪುಗಳು ಯಾವುದು ಪರಿಗಣನೆಗೆ ಬರುವುದಿಲ್ಲ. ಸೋತಾಗ ಮಾತ್ರ ಎಲ್ಲಿ ಎಡವಿದ್ದು ಎಂಬುದು ಗೊತ್ತಾಗುತ್ತಿದೆ. ಆಗ ಅದನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಉತ್ತಮ.