ಸೋತಾಗ ಹಿಗ್ಗಾಮುಗ್ಗ ಬೈಯುವುದು.. ಗೆದ್ದಾಗ ಸಿಕ್ಕಾಪಟ್ಟೆ ಹೊಗಳುವುದು… ಇದು ನಮ್ಮ ಜಾಯಮಾನವೂ ಹೌದು. ಮನುಷ್ಯನ ಸಹಜ ಸ್ವಭಾವವೂ ಹೌದು. ಇದೀಗ ಮುಗಿದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ (South Africa) ಬವುಮಾ ಹುಡುಗರು ಕ್ಲೀನ್ ಸ್ವೀಪ್ ಮಾಡಿಕೊಂಡು ಟೀಮ್ ಇಂಡಿಯಾ (Team India) ಹುಡುಗರನ್ನು ತಲೆ ಎತ್ತಿ ನಡೆಯದಂತೆ ಮಾಡಿದ್ದಾರೆ. ಇನ್ನೊಂದೆಡೆ, ಕ್ರಿಕೆಟ್ ಪಂಡಿತರು, ವಿಶ್ಲೇಷಕರು, ಮಾಜಿ ಕ್ರಿಕೆಟಿಗರು ಸಿಕ್ಕಿದ್ದೇ ಚಾನ್ಸ್ ಅಂತ ಟೀಮ್ ಇಂಡಿಯಾ ಆಟಗಾರರನ್ನು ಮನಬಂದಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಆಟಗಾರರ ಪ್ರತಿಭೆ, ಸಾಮಥ್ರ್ಯವನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ನೇರ ಹೊಣೆ ಎಂದು ದೂರುತ್ತಿದ್ದಾರೆ. ಆದ್ರೆ ಇದೆಲ್ಲಾ ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಮಾಮೂಲಿ ಸಂಗತಿ. ಒಂದು ಸರಣಿ ಸೋಲು ಒಂದೆರಡು ದಿನಗಳಲ್ಲಿ ಮರೆತು ಹೋಗುತ್ತದೆ ಅಷ್ಟೇ.. ಹಾಗೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ಈಗ ಏನಿದ್ರೂ ಮುಗಿದ ಅಧ್ಯಾಯ.
ಅಷ್ಟಕ್ಕೂ ಈ ಸೋಲಿನ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಆಟಗಾರರನ್ನು ಬೊಟ್ಟು ಮಾಡಿ ಟೀಕೆ ಮಾಡೋದು ಸರಿಯಲ್ಲ.. ಆದ್ರೆ ಎಡವಿದ್ದು ಎಲ್ಲಿ..? ಸೋಲು ಯಾಕಾಯ್ತು..? ಅದು ಕೂಡ ತವರಿನಲ್ಲಿ ಸೋತಿರುವುದಕ್ಕೆ ಕಾರಣಗಳೇನು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳುವ ಅಗತ್ಯವಂತೂ ಇದ್ದೇ ಇದೆ.
ಹಾಗೇ ನೋಡಿದ್ರೆ ಇದೇ ಯಂಗ್ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಗೆದ್ದು ಸರಣಿ ಡ್ರಾ ಮಾಡಿಕೊಂಡಿತ್ತು. ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸಾಕಷ್ಟು ಭರವಸೆಯನ್ನೂ ಮೂಡಿಸಿತ್ತು. ಅದೇ ರೀತಿ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೂ ಟೆಸ್ಟ್ ಸರಣಿಯನ್ನು ಕೈ ವಶ ಮಾಡಿಕೊಂಡಿತ್ತು. ಇದೇ ಆಟಗಾರರು ಅದ್ಭುತ ಪ್ರದರ್ಶನವನ್ನೇ ನೀಡಿದ್ರು. ನಾಯಕನಾಗಿ ಗಿಲ್ ಶತಕದ ಮೇಲೆ ಶತಕ ದಾಖಲಿಸಿದ್ದರು. ಕಾಲಿಗೆ ಗಾಯವಾಗಿದ್ರೂ ರಿಷಬ್ ಪಂತ್ ದಿಟ್ಟ ಹೋರಾಟ ನಡೆಸಿದ್ದರು. ಕೆ.ಎಲ್. ರಾಹುಲ್, ಜುರೆಲ್, ಜಡೇಜಾ, ಕುಲದೀಪ್, ಬೂಮ್ರಾ, ಯಶಸ್ವಿ ಜೈಸ್ವಾಲ್, ಸಿರಾಜ್ ಹೀಗೆ ಪ್ರತಿಯೊಬ್ಬರು ತಂಡವಾಗಿ ಆಡಿ ತಂಡದ ಯಶಸ್ಸಿನಲ್ಲಿ ಪಾಲುದಾರರಾಗಿದ್ದರು.
ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೇ ಆಗಲೇ ಇಲ್ಲ. ಟೀಮ್ ಇಂಡಿಯಾ ಸಂಘಟಿತವಾಗಿಯೂ ಆಡಲಿಲ್ಲ. ಆಟಗಾರರ ವೈಯಕ್ತಿಕ ಕೊಡುಗೆಯೂ ಇರಲಿಲ್ಲ. ಕೆಟ್ಟ ಹೊಡೆತಗಳಿಗೆ ವಿಕೆಟ್ ಕೈಚೆಲ್ಲಿಕೊಂಡಿರುವುದು ಸರಿಯಲ್ಲ. ತಾಳ್ಮೆಯಂತೂ ಇರಲೇ ಇಲ್ಲ. ಇನ್ನು ಸಮಯೋಚಿತ ಆಟವನ್ನಂತೂ ಆಡಲೇ ಇಲ್ಲ. ಹಾಗಂತ ವೈಯಕ್ತಿಕವಾಗಿ ಆಟಗಾರರ ಮೇಲೆ ದಾಳಿ ಮಾಡೋದು ಕೂಡ ಸರಿಯಲ್ಲ. ಯಾಕಂದ್ರೆ ಇದೇ ಆಟಗಾರರು ತಮ್ಮ ನೈಜ ಆಟದಿಂದಲೇ ಗಮನಸೆಳೆಯುವಂತಹ ಪ್ರದರ್ಶನವನ್ನು ಈ ಹಿಂದಿನ ಸರಣಿಗಳಲ್ಲಿ ನೀಡಿದ್ರು. ಆದ್ರೆ ಮಾಡಿರುವ ತಪ್ಪುಗಳು ತಪ್ಪೇ. ಅದನ್ನು ಸರಿಪಡಿಸಿಕೊಂಡು ಹೋಗುವುದು ಪ್ರತಿಯೊಬ್ಬ ಆಟಗಾರರ ಆದ್ಯ ಕರ್ತವ್ಯವೂ ಹೌದು. ಜವಾಬ್ದಾರಿಯೂ ಹೌದು.
ನಿಜ, ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್ ತಂಡದಂತೆ ಆಡಿದೆ. ಇದರಲ್ಲಿ ಎರಡು ಮಾತಿಲ್ಲ. ಟೆಸ್ಟ್ ಪಂದ್ಯವನ್ನು ಹೇಗೆ ಆಡಬೇಕು ಎಂಬುದರ ಬಗ್ಗೆ ಯಂಗ್ ಇಂಡಿಯಾಗೆ ಹರಿಣಗಳು ಉಪನ್ಯಾಸ ಮಾಡಿದ್ದಾರೆ. ಟೆಸ್ಟ್ ಪಂದ್ಯ ಅಂದ್ರೆ ಕಂಠಪಾಠ ಮಾಡ್ಕೊಂಡು ಹಾಡುವ ಪದ್ಯ ಅಲ್ಲ. ಸರಿಯಾಗಿ ಅಧ್ಯಯನ ಮಾಡಬೇಕು. ಹಾಡಿಗೆ ರಾಗ, ಸ್ವರ, ಆಲಾಪನೆಯ ಮೂಲಕ ಸಂಗೀತ ಸಂಯೋಜನೆಯ ಮಾಡಿದ್ರೂ ಅದನ್ನು ಹಾಡುಗಾರ ಮನಸಾರೆ ಆಸ್ವಾದಿಸಿಕೊಂಡು ಹಾಡಿದಾಗ ಮಾತ್ರ ಕೇಳಲು ಇಂಪಾಗಿರುತ್ತದೆ. ಅದೇ ರೀತಿ ಟೆಸ್ಟ್ ಮ್ಯಾಚ್ ಕೂಡ. ಏಕಾಗ್ರತೆ, ತಾಳ್ಮೆ, ಜವಾಬ್ದಾರಿ ಹಾಗೂ ಯೋಚನೆ ಮಾಡ್ಕೊಂಡು ಸಮಯೋಚಿತವಾಗಿ, ದೃಢ ಮನಸ್ಸಿನಿಂದ ಆಡಿದ್ರೆ ಮಾತ್ರ ಅದನ್ನು ನೋಡಲು ಚೆಂದ.
ಇದನ್ನೂ ಓದಿ: ಮಾಸ್ ಅಬ್ಬರದ ಮುಂದೆ ಕಳೆದು ಹೋಗುತ್ತಿರುವ ಟೆಸ್ಟ್ ಕ್ರಿಕೆಟ್‌ನ ಕ್ಲಾಸ್ ಆಟ..!
ಹಾಗೇ ದಕ್ಷಿಣ ಆಫ್ರಿಕಾ ಆಟಗಾರರು ಭಾರತದ ನೆಲದಲ್ಲಿ ಆಡಿದ್ದು ಕೂಡ ಇದೇ ರೀತಿ. ಅನನುಭವಿಗಳಾಗಿದ್ರೂ ಬುಗರಿಯಂತೆ ತಿರುಗುವ ಪಿಚ್‍ನಲ್ಲಿ ಟೀಮ್ ಇಂಡಿಯಾ ಆಟಗಾರರನ್ನೇ ಬುಗರಿಯಂತೆ ಆಡಿಸಿರುವುದು ಅಪ್ರತಿಮ ಸಾಧನೆಯೇ ಸರಿ. ಅದರಲ್ಲೂ ನಾಯಕ ಬವುಮಾ ತಂಡವನ್ನು ಮುನ್ನಡೆಸಿದ್ದ ರೀತಿ ಹಾಗೂ ಒಟ್ಟಾರೆ ಹರಿಣಗಳ ಸಂಘಟಿತ ಆಟದ ಎದುರು ಟೀಮ್ ಇಂಡಿಯಾ ಆಟಗಾರರು ಶಸ್ತ್ರತ್ಯಾಗ ಮಾಡಿ ಮಂಡಿಯೂರಿದ್ದು ತುಸು ಬೇಸರವನ್ನುಂಟು ಮಾಡಿದೆ.
ಹೌದು, ಇದು ಟೀಮ್ ಇಂಡಿಯಾದ ಟೆಸ್ಟ್ ಭವಿಷ್ಯಕ್ಕೆ ಎಚ್ಚರಿಕೆಯ ಕರೆಗಂಟೆ. ಇದನ್ನು ಒಪ್ಪಿಕೊಳ್ಳಲೇಬೇಕು. 13 ತಿಂಗಳಲ್ಲಿ ತವರಿನಲ್ಲಿ ಎರಡು ಟೆಸ್ಟ್ ಸರಣಿಗಳನ್ನು ಸೋತಿರುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಯಾಕಂದ್ರೆ ತವರಿನಲ್ಲಿ ಟೀಮ್ ಇಂಡಿಯಾ ಹುಲಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅದರಲ್ಲೂ 2000ದಿಂದ 2003ರವರೆಗೆ ಐದು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದೆ. 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋತಿದೆ. ನಂತರ 2012ರವರೆಗೆ 10 ಸರಣಿಗಳನ್ನು ಗೆದ್ದಿದೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿತ್ತು. ಬಳಿಕ 2012ರಿಂದ 2019ರವರೆಗೆ ಸತತ 12 ಟೆಸ್ಟ್ ಸರಣಿಗಳನ್ನು ಕೈವಶ ಮಾಡಿಕೊಂಡಿತ್ತು. ಈ ಗೆಲುವಿನ ಓಟಕ್ಕೆ ವೆಸ್ಟ್ ಇಂಡೀಸ್ 2019ರಲ್ಲಿ ಕಡಿವಾಣ ಹಾಕಿತ್ತು. 2020ರಿಂದ 2024ರವರೆಗೆ ಸತತ ಆರು ಟೆಸ್ಟ್ ಸರಣಿಗಳನ್ನು ಗೆದ್ದ ಟೀಮ್ ಇಂಡಿಯಾಗೆ ಪೆಟ್ಟು ಕೊಟ್ಟಿದ್ದು ನ್ಯೂಜಿಲೆಂಡ್. ಇದೀಗ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾದ ತವರಿನ ಸಾರ್ವಭೌಮತ್ವಕ್ಕೆ ಭಂಗವನ್ನುಂಟು ಮಾಡಿದೆ.
ಅಂದ್ರೆ ಘಟಾನುಘಟಿ ಆಟಗಾರರು ಇದ್ರೂ ಟೀಮ್ ಇಂಡಿಯಾ ಕಳೆದ 25 ವರ್ಷಗಳಲ್ಲಿ ನಾಲ್ಕು ಟೆಸ್ಟ್ ಸರಣಿಗಳನ್ನು ಕಳೆದುಕೊಂಡಿದೆ. ಅದರಲ್ಲೂ 2024ರ ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲೂ ರೋಹಿತ್ ಶರ್ಮಾ, ಕೊಹ್ಲಿ, ಆರ್. ಅಶ್ವಿನ್ ಆಡಿದ್ರು. ಕಿವಿಸ್ ವಿರುದ್ಧ ಮೊದಲ ಟೆಸ್ಟ್ ಮ್ಯಾಚ್‍ನಲ್ಲಿ ಮಾತ್ರ ರೋಹಿತ್ – ವಿರಾಟ್ ಅರ್ಧ ಶತಕ ದಾಖಲಿಸಿದ್ದರು. ಇನ್ನುಳಿದ 2 ಪಂದ್ಯಗಳಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಆದ್ರೆ ಜೈಸ್ವಾಲ್, ಗಿಲ್, ಪಂತ್, ಜಡೇಜಾ, ವಾಷಿಂಗ್ಟನ್ ಸುಂದರ್, ಸಫ್ರಾಜ್ ಖಾನ್ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು. ಅದೇನೇ ಇರಲಿ.. ಎಲ್ಲಾ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡುವುದು ತುಂಬಾ ವಿರಳ. ಆದ್ರೆ ಒಂದು ಕಾಲದಲ್ಲಿ ಆಸ್ಟ್ರೇಲಿಯಾ ವಿಶ್ವ ಕ್ರಿಕೆಟ್ ಅನ್ನು ಆಳಿದಂತೆ ಟೀಮ್ ಇಂಡಿಯಾ ಕೂಡ ಕಳೆದ 2 ದಶಕಗಳಲ್ಲಿ ವಿಶ್ವ ಕ್ರಿಕೆಟ್‍ನಲ್ಲಿ ಒಡ್ಡೋಲಗವನ್ನೇ ನಡೆಸಿತ್ತು. ಇದೀಗ ಟೀಮ್ ಇಂಡಿಯಾದಲ್ಲಿ ಪ್ರತಿಭಾವಂತ ಆಟಗಾರರು ಇದ್ರೂ ಟೆಸ್ಟ್ ಕ್ರಿಕೆಟ್‍ನಲ್ಲಿ ಮಂಕಾಗುತ್ತಿರುವುದು ಅಚ್ಚರಿಯನ್ನುಂಟು ಮಾಡುತ್ತಿದೆ.
ಮುಖ್ಯವಾಗಿ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಪ್ರಯೋಗ ನಡೆಸುತ್ತಿರುವುದು ತಂಡಕ್ಕೆ ಮುಳುವಾಗುತ್ತಿದೆ. ಐಪಿಎಲ್ ಹೀರೋಗಳನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಆಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಕೇಳಿಬರುತ್ತಿದೆ. ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುವಂತಹ ಬ್ಯಾಟರ್‍ನ ಕೊರತೆ ಕಾಡುತ್ತಿದೆ. ದ್ರಾವಿಡ್, ಪೂಜಾರ ರೀತಿಯಲ್ಲಿ ನೆಲಕಚ್ಚಿ ನಿಂತು ಆಡುವಂತಹ ಬ್ಯಾಟ್ಸ್ ಮೆನ್ ಟೀಮ್ ಇಂಡಿಯಾಗೆ ಅಗತ್ಯವಾಗಿ ಬೇಕಿದೆ.
ಒಟ್ಟಿನಲ್ಲಿ ಕೆಲವೊಂದು ಬಾರಿ ಅನುಭವ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತೆ ಕೆಲವು ಬಾರಿ ಹೊಡಿಬಡಿ ಆಟವೂ ಗೆಲುವಿಗೆ ಕಾರಣವಾಗುತ್ತದೆ. ಆದ್ರೆ ಆ ಸಮಯ.. ಆ ಪರಿಸ್ಥಿತಿ ಹೇಗೆ ಇರುತ್ತೋ ಅದರ ಮೇಲೆ ಅವಲಂಬನೆ ಆಗಿರುತ್ತದೆ. ಅದನ್ನು ಸರಿದೂಗಿಸಿಕೊಂಡಾಗ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ.
ಕೊನೆಯ ಮಾತು.. ನೆನಪಿಡಿ.. ಟೆಸ್ಟ್ ಕ್ರಿಕೆಟ್ ಭಾರತದಲ್ಲಿ ಕಮರಿ ಹೋಗುತ್ತಿರುವ ಸಣ್ಣ ಸುಳಿವು ಸಿಗುತ್ತಿದೆ. ಇನ್ನೊಂದೆಡೆ ದೇಸಿ ಕ್ರಿಕೆಟ್‍ನ ರಂಗು ಕಳೆದುಕೊಳ್ಳುತ್ತಿದೆ. ದೇಸಿ ಕ್ರಿಕೆಟ್‍ನಲ್ಲಿ ಆಡುವುದು ಅಂದ್ರೆ ಆಟಗಾರರಿಗೂ ಒಂದು ರೀತಿಯ ಎನರ್ಜಿ ಭಾವನೆ ಇದೆ. ದಶಕಗಳ ಹಿಂದೆ ಸೀನಿಯರ್ ಆಟಗಾರರು ಕಳೆದುಕೊಂಡಿರುವ ಫಾರ್ಮ್ ಕಂಡುಕೊಳ್ಳಲು ದೇಸಿ ಪಂದ್ಯಗಳಲ್ಲಿ ಆಡುತ್ತಿದ್ದರು. ಆದ್ರೆ ಈಗ ಐಪಿಎಲ್ ಎಂಬ ಎಕ್ಸ್‍ಪ್ರೆಸ್ ಆಟ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್‍ನ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ. ಟೆಸ್ಟ್ ಕ್ರಿಕೆಟ್‍ನ ಕೌಶಲ್ಯಗಳು ಮರೆಯಾಗುತ್ತಿವೆ. ಕಲಾತ್ಮಕತೆಯ ಆಟದ ಸೊಬಗು ಮಾಯವಾಗುತ್ತಿದೆ. ಅಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್‍ಗೆ ಒಗ್ಗಿಕೊಳ್ಳುವ ಮನಸ್ಥಿತಿ ಕೂಡ ಆಟಗಾರರಲ್ಲಿ ಕಾಣುತ್ತಿಲ್ಲ. ಹೀಗಾಗಿ ದೇಸಿ ಕ್ರಿಕೆಟ್ ಮತ್ತು ಯುವ ಆಟಗಾರರ ಮೇಲೆ ಬಿಸಿಸಿಐ ಚಿತ್ತ ಹರಿಸಿದ್ರೆ ಮುಂದಿನ ದಿನಗಳಲ್ಲಿ ಪರಂಪರೆಯ ಟೆಸ್ಟ್ ಕ್ರಿಕೆಟ್‍ನ ಆಟವನ್ನು ನೋಡಬಹುದು.
ಲೇಖನ: ಸನತ್ ರೈ
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








