ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಹಾಗೂ ಶ್ರೀಲಂಕಾದ ಕ್ಯಾಸಿನೋಗೆ ಜಮೀರ್ ಹೋಗಿದ್ದ ಬಗ್ಗೆ ನನ್ನ ಹತ್ತಿರ ದಾಖಲೆ, ಜಮೀರ್ ಮನೆ ಮಾರಲು ರೆಡಿಯಾಗಲಿ ಎಂದು ಉತ್ಸಾಹದಿಂದ ಸಿಸಿಬಿ ಕಚೇರಿಗೆ ಹೋಗಿದ್ದ ಪ್ರಶಾಂತ್ ಸಂಬರಗಿ ಬಾಂಬ್ ಠುಸ್ ಆಯ್ತಾ ಎಂಬ ಚರ್ಚೆ ಎದ್ದಿದೆ.
ಸಿಸಿಬಿ ಅಧಿಕಾರಿಗಳು ನೀಡಿದ ನೋಟಿಸ್ ಮೇರೆಗೆ ವಿಚಾರಣೆಗೆ ತೆರಳಿದ್ದ ಪ್ರಶಾಂತ್ ಸಂಬರಗಿ, ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಕಾಡಿದ್ದಾರೆ ಎನ್ನಲಾಗಿದೆ. ಸಂಬರಗಿ ಕೊಡಲು ಹೋದ ದಾಖಲೆಗಳು, ಫೋಟೋ, ವಿಡಿಯೋ ಬೇಡ, ಅವೆಲ್ಲಾ ಸೋಷಿಯಲ್ ಮೀಡಿಯಾದಲ್ಲಿವೆ. ನಮ್ಮ ಬಳಿಯೂ ಇವೆ ಎಂದು ವಾಪಸ್ ಕೊಟ್ಟಿದ್ದಾರೆ ಎಂದು ಸಂಬರಗಿ ಹೇಳಿಕೊಂಡಿಕೊಂಡಿದ್ದಾರೆ.

ಡ್ರಗ್ಸ್ ಜಾಲ ಹಾಗೂ ಕ್ಯಾಸಿನೋ ಪಾರ್ಟಿಗಳ ಬಗ್ಗೆ ನಾನು ಹೇಳಬೇಕಿದ್ದ, ಕೊಡಲು ಹೋದ ಎಲ್ಲಾ ದಾಖಲೆಗಳು ಸಿಸಿಬಿ ಅಧಿಕಾರಿಗಳ ಬಳಿ ಇದೆ. ನಾನು ಸೋಷಿಯಲ್ ಮೀಡಿಯಾ, ಪತ್ರಿಕೆಗಳು, ಫೋಟೋ, ವಿಡಿಯೋ ಕೊಡಲು ಹೋದೆ. ಆದರೆ ಅಧಿಕಾರಿಗಳು ಸಾಮಾಜಿಕ ಜಾಲತಾನಗಳಲ್ಲಿರುವ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ ಎಂದರು. ಹೀಗಾಗಿ ಮತ್ತೆ ಹೊಸ ದಾಖಲೆಗಳೊಂದಿಗೆ ಶುಕ್ರವಾರ ಬನ್ನಿ ಎಂದು ಕಳಿಸಿದ್ದಾರೆ ಎಂದರು.
ಬೆಳಿಗ್ಗೆ ಸಿಸಿಬಿ ಕಚೇರಿಗೆ ಹೋಗುವಾಗ ಪ್ರಶಾಂತ್ ಸಂಬರಗಿಗೆ ಇದ್ದ ಉತ್ಸಾಹ ಬರುವಾಗ ಇರಲಿಲ್ಲ. ಶಾಸಕ ಜಮೀರ್ ಅಹಮದ್ ಅವರು ಮನೆ ಮಾರಲು ರೆಡಿಯಾಗಲಿ. ನನ್ನ ಫೈಲ್‍ನಲ್ಲಿರುವ ದಾಖಲೆಗಳಿಂದ ಸರ್ಕಾರಕ್ಕೆ ಇನ್ನಷ್ಟು ಟ್ಯಾಕ್ಸ್ ಬರುತ್ತೆ. ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ತಂದು ಕೊಡಿಸುತ್ತೇನೆ. ಇದರಿಂದ ಸರ್ಕಾರಕ್ಕೆ ಹೊಸ ಆದಾಯ ಬರುತ್ತೆ ಎಂದು ಸಂಬರಗಿ ಭಾರೀ ಹುಮ್ಮಸ್ಸಿನಿಂದಲೇ ಹೇಳಿದ್ದರು. ಆದರೆ, ಸತತ 4 ಗಂಟೆಗಳ ಹೇಳಿಕೆ ನೀಡಿ ಸಿಸಿಬಿ ಕಚೇರಿಯಿಂದ ಹೊರಗೆ ಬರುತ್ತಿದ್ದಾಗ ಅವರ ಮುಖ ಕಳೆಗುಂದಿತ್ತು.
ಸಿಸಿಬಿ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರಗಿ, ನಾನು ಕೊಟ್ಟಿರುವ ದಾಖಲೆ ಸಾಕಾಗಲ್ಲ, ಮತ್ತೆ ಶುಕ್ರವಾರ ಹೊಸ ಡಿಜಿಟಲ್ ಸಾಕ್ಷ್ಯಗಳೊಂದಿಗೆ ಬರಲು ಹೇಳಿದ್ದಾರೆ. ಇಂತಹ ಗಂಭೀರ ವಿಚಾರದಲ್ಲಿ ನಾನು ಹಿಟ್ ಅಂಡ್ ರನ್ ಮಾಡಲ್ಲ ಎಂದು ಹೇಳಿದ್ದಾರೆ.
ಸಂಜನಾ ಬಗ್ಗೆ ದಾಖಲೆ ಕೊಟ್ಟಿಲ್ಲ
ಸಂಜನಾ ಗಲ್ರಾನಿ ಶ್ರೀಲಂಕಾಕ್ಕೆ ಹೋಗಿದ್ದು, ಕ್ಯಾಸಿನೋ ಸೇರಿದಂತೆ ಅವರ ಬಗ್ಗೆ ನಾನು ಯಾವ ದಾಖಲೆ ನೀಡಿಲ್ಲ. ಐಟಿ, ಇಡಿ ಕುರಿತು ನಾನು ಏನನ್ನೂ ಮಾತನಾಡಿಲ್ಲ. ಜೊತೆಗೆ ಯಾವುದೇ ನಟ-ನಟಿಯರ ಬಗ್ಗೆ ನಾನು ದಾಖಲೆ ನೀಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿಲ್ಲ. ರಾಜಕೀಯ ಪ್ರೇರಿತನಾಗಿ ಅಭಿಯಾನ ನಡೆಸುತ್ತಿಲ್ಲ ಎಂದು ಪ್ರಶಾಂತ್ ಸಂಬರಗಿ ಸ್ಪಷ್ಟಪಡಿಸಿದ್ದಾರೆ.

ನಾನು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ. ಸದ್ಯಕ್ಕೆ ತನಿಖಾ ಹಂತದಲ್ಲಿರುವುದರಿಂದ ಏನೂ ಹೇಳಲ್ಲ. ಯಾವುದೇ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಬರಗಿ ತಿಳಿಸಿದ್ದಾರೆ.








