ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್‌ ಉದ್ದೇಶವೇನೋ ಈಡೇರಿದೆ, ಆದರೂ ಈ ಮೇಕೆದಾಟು ಯೋಜನೆಯನ್ನು ನಾವೇಕೆ ವಿರೋಧಿಸಬೇಕು ಗೊತ್ತೆ?

1 min read
Mekedatu Saaksha Tv

ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್‌ ಉದ್ದೇಶವೇನೋ ಈಡೇರಿದೆ, ಆದರೂ ಈ ಮೇಕೆದಾಟು ಯೋಜನೆಯನ್ನು ನಾವೇಕೆ ವಿರೋಧಿಸಬೇಕು ಗೊತ್ತೆ?

ಅಂತೂ ಕೊನೆಗೂ ಕಾಂಗ್ರೆಸ್‌ ರಾಜಕಾರಣದ ಸುಲಭ ಪಟ್ಟುಗಳ ಪಾಠ ಕಲಿತಿತು. ಅಥವಾ ಕಾಂಗ್ರೆಸ್‌ ಚುನಾವಣೆ ಹತ್ತಿರ ಬಂದಂತೆಲ್ಲಾ ತನ್ನ ಮಂದ ಬುದ್ದಿಯನ್ನು ಚುರುಕುಗೊಳಿಸಿಕೊಳ್ಳುತ್ತದೇನೋ. ಈಗ ಮೇಕೆದಾಟು ವಿಚಾರವನ್ನು ತೆಗೆದುಕೊಳ್ಳಿ, ಕಾಂಗ್ರೆಸ್‌ ತನ್ನ ಉದ್ದೇಶ ಈಡೇರಿಸಿಕೊಂಡಿದೆ. ಎಷ್ಟೇ ಅಧಿಕಾರ, ಪ್ರಭಾವ ಮತ್ತು ಬುದ್ದಿವಂತಿಕೆ ಉಪಯೋಗಿಸಿ ವ್ಯೂಹ ಹಣೆದರೂ ಪಿಗ್ಗಿ ಬಿದ್ದಿದ್ದು ಮಾತ್ರ ಆಡಳಿತಾರೂಢ ಬಿಜೆಪಿ ಸರ್ಕಾರವೇ. ಪಾದಯಾತ್ರೆಯ ರಾಜಕಾರಣ ಬಳಸಿ ಬೊಮ್ಮಾಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಕಾಂಗ್ರೆಸ್‌ನ ಹೊಸ ಜೋಡೆತ್ತು ಸಿದ್ದು-ಡಿಕೆಶಿ ಏನಾಗಬೇಕಿತ್ತೋ ಅದನ್ನಷ್ಟೇ ಅಚ್ಚುಕಟ್ಟಾಗಿ ಮಾಡಿಕೊಂಡಿದೆ.mekedaatu padayathre - saakshatv

ಮಾಜಿ ಸಿಎಂ ಬಿಜೆಪಿಯ ಗಾಡ್‌ ಫಾದರ್‌ ಬಿಎಸ್‌ ಯಡಿಯೂರಪ್ಪ ಸೂಚಿಸಿದಂತೆ ಈ ಕೈ ಪಾದಯಾತ್ರೆಯನ್ನು ನಿರ್ಲಕ್ಷ್ಯ ಮಾಡಲು ಸರ್ಕಾರಕ್ಕೆ ಆಗಲಿಲ್ಲ. ಕುಮಾರಸ್ವಾಮಿ ಮತ್ತು ಜೆಡಿಎಸ್ ಐಟಿ ಸೆಲ್‌ ಮತ್ತು ಸೋಶಿಯಲ್‌ ಮೀಡಿಯಾ ಸೆಲ್ (ಹಾಗೊಂದು ಯಂತ್ರೋಪಕರಣ ಜೆಡಿಎಸ್‌ ಬಳಿ ಇದ್ದರೇ) ಛೂ ಬಿಟ್ಟು ಪಾದಯಾತ್ರೆ ಟ್ರೋಲ್ ಮಾಡಿ ನಗೆಪಾಟಲು ಮಾಡುವ ಪ್ರಯತ್ನವೂ ಪೂರ್ತಿ ಯಶಸ್ವಿಯಾಗಲಿಲ್ಲ. ಕುಮಾರಸ್ವಾಮಿ ಕಬ್ಬಿನ ಹಾಲು ಕಬಾಬು ಅಂಗಡಿ ಅಂತ ಗಂಟಲು ಹರಿದುಕೊಂಡಿದ್ದೇ ಬಂತು. ಸಾತನೂರಲ್ಲಿ ಎರಡು ಕನಕಪುರದಲ್ಲಿ ಒಂದು ಒಟ್ಟು ಮೂರು ಎಫ್ ಐ ಆರ್ ಆದ್ರೂ ಪಾದಯಾತ್ರೆ‌ ನಿರಾತಂಕವಾಗಿ ಸಾಗಿತು. ಸಿಎಂ ಬೊಮ್ಮಾಯಿ ಹಾಸ್ಪೆಟೆಲ್ ಸೇರಿದ್ರು, ಪ್ರಮುಖ ಸಚಿವರು ಹೋಂ ಕ್ವಾರಂಟೈನ್ ನಲ್ಲಿ ಉಳಿದ್ರು. ಹೊನ್ನಾಳಿಯ ರೇಣುಕಾಚಾರಿ, ಗುತ್ತೇದಾರ, ಎಳ್ಳಮವಾಸ್ಯೆ ಜಾತ್ರೆ ಜನಜಂಗುಳಿ ಕಾಣ್ಲಿಲ್ವಾ ಅಂತ ಡಿಕೆ ಚೆಕ್ ಮೇಟ್ ಕೊಟ್ಟರು.

ಫೈನಲಿ ಹೈಕೋರ್ಟ್‌ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದೂ ಸಹ ಕಾಂಗ್ರೆಸ್‌ಗೆ ಭರ್ಜರಿ ಲಾಭವನ್ನೇ ಉಂಟುಮಾಡಿತು. ಹೇಗ್ರಿ ಅನುಮತಿ ಕೊಟ್ರಿ ಪಾದಯಾತ್ರೆಗೆ ಅಂತ ಉಚ್ಛ ನ್ಯಾಯಾಲಯ ತಪರಾಕಿ ಕೊಟ್ಟಿತಲ್ಲ, ಆಗಲೇ ಸಿದ್ದು ಎಂಡ್‌ ಡಿಕೆಶಿ ಮೀಸೆಯಡಿಯಲ್ಲಿ ನಸುನಕ್ಕರು. ಯಾಕಂದರೆ, ಡಿಕೆ ಶಿವಕುಮಾರ್ ಅರೆಸ್ಟ್ ಮಾಡದೇ ಪಾದಯಾತ್ರೆ ನಿಲ್ಲುವಂತಿಲ್ಲ. ಸಿದ್ದರಾಮಯ್ಯನವರನ್ನು ಅರೆಸ್ಟ್ ಮಾಡಲು ಸಾಧ್ಯಔಲ್ಲ. ಅವರಿಗೆ ಅವತ್ತು ಜ್ವರ ಬಂದಿತ್ತು ಮೊನ್ನೆ ಬೆನ್ನು ನೋವು ಬಂದಿತು. ಡಿಕೆಶಿ ಬಂಧಿಸಿದ್ರೆ ಸರ್ಕಾರ ಮತ್ತು ಬಿಜೆಪಿ ತನ್ನ ಸೋಲು ಒಪ್ಪಿಕೊಂಡ ಹಾಗೆ ಅನ್ನುವುದು ರಾಜಕಾರಣದ ಬೇಸಿಕ್ಸ್‌ ಗೊತ್ತಿರುವ ಯಾರಿಗಾದರೂ ಅರ್ಥವಾಗುವ ಸತ್ಯ. ಈ ಮಧ್ಯೆ ಕೋವಿಡ್‌ ಕೇಸ್‌ ಹೆಚ್ಚಳದ ಕಾರಣ ಕೋರ್ಟ್‌ ಕೆಪಿಸಿಸಿಗೂ ನೋಟೀಸ್‌ ನೀಡಿತ್ತಲ್ಲ, ಅಂತೂ ಕೊನೆಗೂ ಕಾಂಗ್ರೆಸ್‌ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಮುಂದೂಡಿತು.

ಅಲ್ಲಿಗೆ ಕಾಂಗ್ರೆಸ್‌ನ ಪಾದಯಾತ್ರೆ ಅಜೆಂಡಾ ಹಳೆ ಮೈಸೂರು ಭಾಗದಲ್ಲಿ ಅದರ ಬೇರುಗಳನ್ನು ಭದ್ರ ಮಾಡಿದೆ. ಮೇಕೆದಾಟು ಪಾದಯಾತ್ರೆ ಬಗ್ಗೆ ಗಮನಿಸಬೇಕಾದ ಮತ್ತೊಂದು ಮಹತ್ವದ ಸಂಗತಿ ಎಂದರೆ ಕಾಂಗ್ರೆಸ್‌ಗೂ ಈ ಯೋಜನೆ ಆಗಲೇ ಬೇಕೆಂದು ಏನಿಲ್ಲ. ನಮ್ಮ ನೀರು ನಮ್ಮ ಹಕ್ಕು ಅನ್ನುವುದು ಸದ್ಯಕ್ಕೆ ಅದಕ್ಕಿದ್ದ ಒಂದು ಪರ್ಯಾಯ ಮಾತ್ರವೇ ಆಗಿತ್ತು. ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಒಂದು ವೇದಿಕೆ ಬೇಕಿತ್ತು. ಈ ವೇದಿಕೆಯನ್ನು ಕಾಂಗ್ರೆಸ್‌ ಅದ್ಭುತವಾಗಿ ಬಳಸಿಕೊಂಡಿತು ಅಷ್ಟೆ. ಪರಿಣಾಮ, ನೈಟ್ ಕರ್ಫ್ಯೂ ವೀಕೆಂಡ್ ಲಾಕ್ ಡೌನ್ ಯಾವ ಪುರುಶಾರ್ಥಕ್ಕೆ ಮಾಡಿದ್ರಿ ಅನ್ನೋ ಜನಸಾಮಾನ್ಯನ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿಲ್ಲ. ಸಂಪೂರ್ಣ ಲಾಕ್ ಡೌನ್ ಬಗ್ಗೆ ಎರಡು ಹೇಳಿಕೆ ಕೊಟ್ಟು ಅರಗ ಜ್ಞಾನೇಂದ್ರ ಗೊಂದಲ ಸೃಷ್ಟಿಸಿದರು. ಅತ್ತ ಸಂಕ್ರಾಂತಿ ನಂತರ ಟೀಂ ಚೇಂಜ್ ಅಂತ ರೆಬೆಲ್ ಸ್ಟಾರ್ ಯತ್ನಾಳ್ ಬಾಂಬ್ ಹಾಕಿದ್ದು ಮತ್ತೊಂದು ಚರ್ಚೆಗೆ ಗ್ರಾಸವಾಯಿತು. ಬೊಮ್ಮಾಯಿ ಸರ್ಕಾರ ಗಟ್ಟಿಯಲ್ಲ ಅನ್ನೋದು ರಾಮನಗರದಲ್ಲಿ ಅಶ್ವಥ್‌ ನಾರಾಯಣ್‌-ಡಿಕೆ ಸುರೇಶ್ ಬಹಿರಂಗ ಜಂಗಿ ಕುಸ್ತಿಯ ನಂತರ ಮತ್ತೆ ಸಾಬೀತಾಯ್ತು ಅಷ್ಟೆ.

ಈಗ ವಿಚಾರಕ್ಕೆ ಬರೋಣ. ಈ ಮೇಕೆದಾಟು ಅನ್ನುವ ಯೋಜನೆ ಯಾವ ಸರ್ಕಾರ ಮಾಡಿದರೂ ಯಾವುದೇ ಪ್ರಜ್ಞಾವಂತ ಪ್ರಜೆ, ಪರಿಸರ ಕಾಳಜಿ ಇರುವವನೂ ವಿರೋಧಿಸಲೇಬೇಕು. ಆಳುವ ಸರ್ಕಾರಗಳಿಗೆ ಅಸಲಿ ಯೋಜನೆಗಿಂತ ಈ ಯೋಜನೆಯ ವೆಚ್ಚದ ಕಿಕ್‌ ಬ್ಯಾಕ್‌ ಲಾಲಸೆಯೇ ಮುಖ್ಯವಾಗತ್ತೆ. ಸುಮಾರು 9,000 ಕೋಟಿ ರೂಪಾಯಿ ವೆಚ್ಚದ ಮೇಕೆದಾಟು ಯೋಜನೆಯು 227 ಹೆಕ್ಟೇರ್ ಕಂದಾಯ ಭೂಮಿ ಮತ್ತು 5100 ಹೆಕ್ಟೇರ್ ಸಂರಕ್ಷಿತ ಅರಣ್ಯ ಭೂಮಿಯನ್ನು ಮುಳುಗಿಸುತ್ತದೆ. ಈ ಯೋಜನೆಯಿಂದ ಸುಮಾರು 400 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆಯಾದರೇ, 4.75 ಟಿಎಂಸಿ ಕುಡಿಯುವ ನೀರು ಲಭ್ಯವಾಗುತ್ತದೆ. ಆದರೆ ಈ ಯೋಜನೆ ಕಾರ್ಯಗತಗೊಂಡರೇ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಚಾಮರಾಜನಗರ ಅರಣ್ಯಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಮಾನವ-ಪ್ರಾಣಿ ಸಂಘರ್ಷ ತಾರಕಕ್ಕೇರಲಿದೆ. 2018ರಲ್ಲಿ, ಸುಪ್ರೀಂ ಕೋರ್ಟ್ ತಮಿಳುನಾಡಿಗೆ ತನ್ನ ನೀರಿನ ಹಂಚಿಕೆಯನ್ನು 14.75 ಟಿಎಂಸಿ (ಕಬಿನಿ ಮತ್ತು ಕೃಷ್ಣ ರಾಜ ಸಾಗರ ಅಣೆಕಟ್ಟುಗಳಿಂದ) ಕಡಿಮೆ ಮಾಡುವಂತೆ ಕರ್ನಾಟಕವನ್ನು ಕೇಳಿತ್ತು. ಬೆಂಗಳೂರಿನ ಕುಡಿಯುವ ನೀರು ಮತ್ತು ಗೃಹ ಅಗತ್ಯಗಳನ್ನು ಪೂರೈಸಲು 4.75 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಕೂಡಾ ನ್ಯಾಯಾಲಯ ಸೂಚಿಸಿತ್ತು.

ಅಂದಹಾಗೆ ಈ ಮೇಕೆದಾಟು ಯೋಜನೆ ಇಂದು ನೆನ್ನೆಯದ್ದೇನಲ್ಲಾ. 1848ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಈ ಯೋಜನೆಗೆ ಪ್ರತಿರೋದ ತೋರಿತ್ತು, ಈಗ ತಮಿಳುನಾಡೂ ಕೂಡಾ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದೆ. ಕೇಂದ್ರ ಮೇಕೆದಾಟುವಿಗೆ ತಾತ್ವಿಕ ಒಪ್ಪಿಗೆ ನೀಡಿದೆ. ಇನ್ನೊಂದು ಮೂಲದ ಮಾಹಿತಿ ಪ್ರಕಾರ ಈ ಯೋಜನೆಯಿಂದ ಅರಣ್ಯ ಮತ್ತು ಕಂದಾಯ ಭೂಮಿ ಸೇರಿ ಸರಿ ಸುಮಾರು 12000 ಎಕರೆ ಭೂಮಿ ಮುಳುಗಡೆಐಗಲಿದೆ. ಕಂದಾಯ ಭೂಮಿಯಲ್ಲಿರುವ ರೈತರು ನಿರ್ವಸತಿಗಲಿದ್ದಾರೆ, ಆನೆ ಕಾರಿಡಾರ್ ನಾಶವಾಗಲಿದೆ, ಇಲ್ಲಿನ ಕಾವೇರಿ ಸಂಗಮ ಸಂರಕ್ಷಿತಾರಣ್ಯದ ವನ್ಯ ಜೀವಿಗಳ ಬದುಕು ಅತಂತ್ರವಾಗಲಿದೆ. ಅಲ್ಲಿ ಆಗಾಗ ಕಾಣಿಸಿಕೊಳ್ಳುವ ಹುಲಿಗಳ ನ್ಯಾಚುರಲ್‌ ಟೆರಿಟರಿ ಸರ್ವನಾಶವಾಗಲಿದೆ. ಕಾವೇರಿಯ ಅತಿ ಅಪರೂಪದ ಮೆಹಶೀರ್‌ ಮೀನುಗಳೆಂಬ ಎಂಡೇಜರ್‌ ಜಲಚರಕ್ಕೆ ಧಕ್ಕೆಯಾಗಲಿದೆ. ಸಂಗಮ ವನ್ಯಜೀವಿ ಅಭಯಾರಣ್ಯದಲ್ಲಿ ಹೆಚ್ಚಾಗಿ ಕಂಡುಬರುವ ಟರ್ಮಿನಾಲಿಯಾ ಅರ್ಜುನ ಎಂಬ ಜಾತಿಯ ಬೃಹತ್‌ ಅಮೂಲ್ಯ ವೃಕ್ಷಗಳು ನೀರಿನ ತಳ ಸೇರಲಿವೆ.

mekedaatu padayathre - saakshatv Mekedatu Project Mekedatu Padayatra Saaksha Tv

ಕಾವೇರಿಯ ಹರಿವಿನ ಪಾತ್ರದಲ್ಲಿ 98 ಪ್ರಮುಖ ಮತ್ತು ಸಣ್ಣ ನೀರಾವರಿ ಅಣೆಕಟ್ಟುಗಳಿವೆ. ಇದರ ಒಟ್ಟು ಜಲಾನಯನ ಪ್ರದೇಶದ ಜಲಾಶಯಗಳು 297 ಟಿಎಂಸಿ ನೇರ ಶೇಖರಣಾ ಸಾಮರ್ಥ್ಯ ಹೊಂದಿದ್ದರೇ, ಒಟ್ಟು ಸಂಗ್ರಹ ಸಾಮರ್ಥ್ಯ 329 ಟಿಎಂಸಿ. ಕರ್ನಾಟಕ ಕಾವೇರಿಗೆ 57 ಅಣೆಕಟ್ಟುಗಳನ್ನು ಕಟ್ಟಿಕೊಂಡಿದೆ ಮತ್ತು ಒಟ್ಟು ಸಂಗ್ರಹಹವಾಗುವ ನೀರಿನ ಸಾಮರ್ಥ್ಯ 133-157 ಟಿಎಂಸಿ. ತಮಿಳುನಾಡು 37 ಅಣೆಕಟ್ಟುಗಳನ್ನು ಹೊಂದಿದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 154-160 ಟಿಎಂಸಿ. ಇನ್ನು ಕೇರಳವೂ 4 ಅಣೆಕಟ್ಟುಗಳನ್ನು ನಿರ್ಮಿಸಿದ್ದು ಒಟ್ಟು ೧೦-13 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಈಗ ಚಾಲ್ತಿಯಲ್ಲಿರುವ ವಾದವೆಂದರೇ, ಕಾವೇರಿಯ ಹೆಚ್ಚುವರಿ ಕಾವೇರಿ ನೀರನ್ನು ಬಳಸಿಕೊಂಡು 9,000 ಕೋಟಿ ರೂ.ಗಳ ಪ್ರಸ್ತಾವಿತ ಜಲಾಶಯ ಯೋಜನೆಯ ಉದ್ದೇಶ ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಗುರಿ ಮಾತ್ರವೇ ಹೊರತು ನೀರಾವರಿಗಾಗಿ ಅಲ್ಲ. ಹೀಗಾಗಿ ತಮಿಳುನಾಡು ಈ ಯೋಜನೆಯನ್ನು ವಿರೋಧಿಸುವಂತಿಲ್ಲ.

ವಾಸ್ತವವಾಗಿ, 67 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯದೊಂದಿಗೆ, ಕರ್ನಾಟಕವು 400 ಮೆಗಾವ್ಯಾಟ್ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸುವುದರ ಜೊತೆಗೆ ಟಿ ಕ್ಯಾಪಿಟಲ್‌ ಬೆಂಗಳೂರಿಗೆ 4.75 ಟಿಎಂಸಿ ನೀರನ್ನು ಬಳಸಿಕೊಳ್ಳುವ ಗುರಿ ಹೊಂದಿದೆ. ಮೇಕೆದಾಟು ಆಣೆಕಟ್ಟು ನಿರ್ಮಾಣವಾದರೇ ಬೆಂಗಳೂರಿಗೆ ಕುಟಿಯುವ ನೀರೇನೋ ಸಿಗುತ್ತದೆ ಆದರೆ ಸ್ಥಳೀಯ ಪರಿಸರದ ಸಮತೋಲನ ತಪ್ಪುತ್ತದೆ, ಅರಣ್ಯ ಮತ್ತು ಜೀವಿ ಪರಿಸರದ ಮೇಲೆ ಪ್ರಯಕೂಲ ಪರಿಣಾಮ ಉಂಟಾಗುತ್ತದೆ ಎಂದು ಜೀವಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

mekedaatu padayathre - saakshatv

ಈ ಮೇಕೆದಾಟು ಪ್ರಸ್ತಾವಿತ ಸಮತೋಲನ ಜಲಾಶಯ ನಿರ್ಮಾಣವಾದರೆ, ಪ್ರಖ್ಯಾತ ಧಾರ್ಮಿಕ ಪ್ರವಾಸಿ ತಾಣ ಮುತ್ತತ್ತಿ ಸೇರಿದಂತೆ ಅನೇಕ ಜನವಸತಿ ಗ್ರಾಮಗಳು ಮುಳುಗಡೆಯಾಗಲಿವೆ. ಬೊಮ್ಮಸಂದ್ರ, ಗಾಳೆಬೋರೆ, ಮಡಿವಾಳ, ಕೊಗ್ಗೆದೊಡ್ಡಿ ಅಥವಾ ಮಾವಳ್ಳಿ, ನೆಲ್ಲೂರು ದೊಡ್ಡಿ , ಸಂಪತಗೆರೆ ದೊಡ್ಡಿ ಗ್ರಾಮಗಳು ಹಾಗೂ ಪ್ರಸಿದ್ದ ಶ್ರೀ ಶಿವಾಂಕರೇಶ್ವರ ಸ್ವಾಮಿ ದೇವಸ್ಥಾನ, ಎಲೆ ಮಾರಮ್ಮ, ಬಸವೇಶ್ವರ, ಸಿದ್ದಪ್ಪಾಜಿ ದೇವಾಲಯ, ಮರಿಯಮ್, ಸಂಗಮೇಶ್ವರ ಧಾರ್ಮಿಕ ಸ್ಥಳಗಳು ನೀರು ಪಾಲಾಗಲಿವೆ. ಮೇಕೆದಾಟುವಿನಿಂದ 6-7 ಕಿ.ಮೀ ವ್ಯಾಪ್ತಿಯೊಳಗಿನ ಆರು ಜನವಸತಿ ಹಾಗೂ ಆರು ಧಾರ್ಮಿಕ ಸ್ಥಳಗಳು ಮುಳುಗಡೆ ಆಗಲಿವೆ ಎಂಬ ಅಂದಾಜಿದೆ. ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ನಿವಾಸಿಗಳು ಗುಳೆ ಏಳಬೇಕಾಗುತ್ತದೆ. ಪ್ರೇಕ್ಷಣಿಯ ಸ್ಥಳವಾಗಿರುವ ಮೇಕೆದಾಟುವಿಗೆ ಪ್ರತಿವಾರ ಸುಮಾರು ಮೂರು ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆಣೆಕಟ್ಟಿ ನಿರ್ಮಾಣವಾದ ನಂತರ ಈಗಿನ ರಮಣೀಯ ಪರಿಸರ ಉಳಿಯುವುದಿಲ್ಲ.

ಇವತ್ತು ಕಾಂಗ್ರೆಸ್‌, ನಾಳೆ ಜನತಾದಳ ನಾಡಿದ್ದು ಇದೇ ಕಮಲ ಪಕ್ಷ ಮತ್ತೆ ಇದೇ ಅಜೆಂಡಾ ಹೊತ್ತು ರಸ್ತೆಗಿಳಿದಾಗಲೂ ನಮ್ಮ ನಿಲುವು ಈ ಯೋಜನೆಯನ್ನು ವಿರೋಧಿಸುವುದೇ ಆಗಬೇಕು. ಈ ಯೋಜನೆಯನ್ನು ಯಾರೇ ಅನುಷ್ಠಾನಕ್ಕೆ ತರಲು ಯತ್ನಿಸದರೂ ಅದು ಖಂಡನೀಯವೇ. ಬೆಂಗಳೂರಿನಲ್ಲಿ ಸುರಿವ ವಾರ್ಷಿಕ ಮಳೆಯನ್ನು ಹಿಡಿದುಟ್ಟುಕೊಂಡರೇ ೧೫ ಟಿಎಂಸಿ ನೀರು ಸಂಗ್ರಹವಾಗತ್ತಂತೆ. ಸದ್ಯ ಬೆಂಗಳೂರಿಗೆ ಕುಡಿಯಲು ಬೇಕಿರುವುದು ಕೇವಲ ೫ ಟಿಎಂಸಿ ಮಾತ್ರ. ಆದರೆ ಬೆಂಗಳೂರಿನಲ್ಲಿ ಮಳೆನೀರಿನ ಕೊಯ್ಲು ಅನ್ನುವ ಯೋಜನೆಯ ಬಗ್ಗೆ ಯಾವ ಮಹಾನುಭಾವನೂ ಚಕಾರ ಎತ್ತುವುದಿಲ್ಲ. ಈಗ ಅಳಿದುಳಿದಿರುವ ೨೭ ಕೆರೆಗಳ ಹೂಳು ಎತ್ತಿದರೂ ೪೦% ಬೆಂಗಳೂರಿಗರ ನೀರಿ ತಾಪತ್ರಯ ಮುಗಿಯುತ್ತದೆ. ಕೆಸಿ ವ್ಯಾಲಿಯಂತ ಇನ್ನೊಂದು ಜಲಶುದ್ಧೀಕರಣ ಮರುಬಳಕೆ ಅಥವಾ ಅಂತರ್ಜಲ ಮರುಪೂರಣ ಯೋಜನೆ ಜಾರಿ ಮಾಡಬಹುದಾದ ಆಯ್ಕೆ ನಮ್ಮ ಮುಂದಿದೆ. ಆದರೂ ಈ ಅವಿವೇಕಿಗಳಿಗೆ ದೊಡ್ಡ ದೊಡ್ಡ ಸಾವಿರಾರು ಕೋಟಿಯ ನೀರಾವರಿ ಯೋಜನೆಗಳೇ ಬೇಕು. ನೆನಪಿಡಿ ನಾವೀಗ, ಮುಂದೆಯೂ ವಿರೋಧಿಸಬೇಕಿರುವುದು ತಾಂತ್ರಿಕವಾಗಿ ಸಾಧ್ಯವಿಲ್ಲದ ಇಂತಹ ಕಾಡುನಾಶದ ಯೋಜನೆಗಳನ್ನೇ.
-ವಿಭಾ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd