ಟೀಮ್ ಇಂಡಿಯಾದಲ್ಲಿ ಯಾರ ಸ್ಥಾನವೂ ಭದ್ರವಾಗಿಲ್ಲ….!
ಟೀಮ್ ಇಂಡಿಯಾ ಸದ್ಯ ವಿಶ್ವದ ಬಲಿಷ್ಠ ತಂಡ. ಈ ಮಾತಲ್ಲಿ ಯಾವುದೇ ರೀತಿಯ ಅನುಮಾನವೂ ಇಲ್ಲ. ಅದ್ಭುತ ಪ್ರತಿಭಾನ್ವಿತ ಆಟಗಾರರು.. ಯಾವುದೇ ಹಂತದಲ್ಲೂ ತೀರುಗೇಟು ನೀಡುವ ಸಾಮಥ್ರ್ಯ…ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಾಯಿಸುವಂತಹ ಆಟಗಾರರು… ಆಕ್ರಮಣಕಾರಿ ಪ್ರವೃತ್ತಿ, ಮಾನಸಿಕವಾಗಿ ಸದೃಢಗೊಂಡಿರುವ ತಂಡ.. ಹೋರಾಟದ ಮನೋಭಾವನೆ.. ಗೆಲ್ಲಲೇಬೇಕು ಅನ್ನೋ ಹಠ ಹೀಗೆ ಎಲ್ಲಾ ವಿಧದಲ್ಲೂ ಟೀಮ್ ಇಂಡಿಯಾ ಒಂದು ಹೆಜ್ಜೆ ಮುಂದಿದೆ.
ಒಂದು ಕಾಲದಲ್ಲಿ ಟೀಮ್ ಇಂಡಿಯಾ ಎರಡು ಮೂರು ಆಟಗಾರರನ್ನು ಹೆಚ್ಚು ಅವಲಂಬಿತವಾಗಿತ್ತು. ಈ ಹಿಂದೆ ಸಚಿನ್ ಆಡಿದ್ರೆ ಮಾತ್ರ ರನ್.. ವಿರಾಟ್ ಕೊಹ್ಲಿ ಸರಾಗವಾಗಿ ರನ್ ದಾಖಲಿಸಿದ್ರೆ ಸಾಕು ಟೀಮ್ ಇಂಡಿಯಾ ಗೆಲ್ಲುತ್ತೆ ಅನ್ನೋ ಮಾತಿತ್ತು.
ಆದ್ರೆ ಈಗ ಹಾಗಲ್ಲ. ವಿರಾಟ್ ಕೊಹ್ಲಿಯ ಮೇಲೆ ಯಾವುದೇ ರೀತಿಯ ಒತ್ತಡಗಳಿಲ್ಲ. ಆರಾಮವಾಗಿ ವಿರಾಟ್ ಆಡಿದ್ರೆ ಸಾಕು.. ವಿರಾಟ್ ಕೊಹ್ಲಿ ಮೇಲಿನ ಒತ್ತಡವನ್ನು ಇನ್ನುಳಿದ ಆಟಗಾರರು ಕಡಿಮೆ ಮಾಡುತ್ತಾರೆ.
Team India doesn’t depend on just one player
ಅಷ್ಟೇ ಅಲ್ಲ, ಟೀಮ್ ಇಂಡಿಯಾ ಗೆಲುವು ಒಬ್ಬ ಆಟಗಾರನ ಮೇಲೆ ನಿಂತಿಲ್ಲ. ವಿರಾಟ್ ಕೊಹ್ಲಿ ತಂಡದಲ್ಲಿ ಇಲ್ಲದಿದ್ರೂ ಗೆಲ್ಲುವ ಸಾಮಥ್ರ್ಯ ಟೀಮ್ ಇಂಡಿಯಾಗಿದೆ. ಆ ಮಟ್ಟದಲ್ಲಿ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ನಲ್ಲಿ ಬೆಳೆದು ನಿಂತಿದೆ.
ಇದಕ್ಕೆ ಸಾಕ್ಷಿ, ನಿದರ್ಶನಗಳು ಈ ಹಿಂದಿನ ಅನೇಕ ಪಂದ್ಯಗಳಿವೆ. ಇದಕ್ಕೆ ಪೂರಕವಾಗಿ ಇತ್ತಿಚಿನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಗಳಲ್ಲಿ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನ ಅತ್ಯದ್ಭುತವಾಗಿದೆ.
ಮುಖ್ಯವಾಗಿ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರು ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಅದು ಬ್ಯಾಟಿಂಗ್ ಇರಲಿ, ಫೀಲ್ಡಿಂಗ್ ಇರಲಿ, ಅಥವಾ ಬೌಲಿಂಗ್ ಇರಲಿ.. ಎಲ್ಲಾ ವಿಭಾಗದಲ್ಲೂ ಎದುರಾಳಿ ತಂಡದ ಗೇಮ್ ಪ್ಲಾನ್ ಗಳನ್ನು ಉಲ್ಟಾಪಲ್ಟಾ ಮಾಡುವಂತಹ ಯುವ ಆಟಗಾರರು ಕೊಹ್ಲಿ ಪಡೆಯನ್ನು ಸೇರಿಕೊಂಡಿದ್ದಾರೆ.
ಯುವ ಆಟಗಾರರಾದ ಶುಬ್ಮನ್ ಗಿಲ್, ರಿಷಬ್ ಪಂತ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ಬ್ಯಾಟಿಂಗ್ ನಲ್ಲಿ ಮಿಂಚು ಹರಿಸುತ್ತಿದ್ರೆ, ಬೌಲಿಂಗ್ ನಲ್ಲಿ ಶಾರ್ದೂಲ್ ಥಾಕೂರ್, ಮಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮೊದಲಾದವರು ಟೀಮ್ ಇಂಡಿಯಾದಲ್ಲಿದ್ದಾರೆ.
ಹೀಗಾಗಿ ಟೀಮ್ ಇಂಡಿಯಾ ಒನ್ ಮ್ಯಾನ್ ಆರ್ಮಿಯಲ್ಲ.
ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್ ಪ್ರವರ್ಧಮಾನಕ್ಕೆ ಬರುತ್ತಿದೆ. ಯುವ ಆಟಗಾರರ ಮಾನಸಿಕ ಗಟ್ಟಿತನ ತಂಡಕ್ಕೆ ವರದಾನವಾಗುತ್ತಿದೆ. ಅಲ್ಲದೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಪೂಜಾರ, ರಹಾನೆ, ಮಹಮ್ಮದ್ ಶಮಿ, ಅಶ್ವಿನ್, ಇಶಾಂತ್ ಶರ್ಮಾ, ಬೂಮ್ರಾ ಸೇರಿದಂತೆ ಎಲ್ಲರಿಗೂ ಯುವ ಆಟಗಾರರು ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
ಒಟ್ಟಾರೆ, ಟೀಮ್ ಇಂಡಿಯಾದಲ್ಲಿ ಸದ್ಯಕ್ಕಂತೂ ಯಾರ ಸ್ಥಾನವೂ ಭದ್ರವಾಗಿಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ್ರೆ ಮಾತ್ರ ತಂಡದಲ್ಲಿ ಉಳಿಗಾಲ. ಇಲ್ಲ ಅಂದ್ರೆ ತೆರೆಮರೆಗೆ ಸೇರಕೊಳ್ಳಬೇಕಾಗುತ್ತದೆ. ಅಷ್ಟೊಂದು ಸ್ಪರ್ಧೆ ಟೀಮ್ ಇಂಡಿಯಾದಲ್ಲಿದೆ.