ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯ ಮೇಲೆ ಚಾಕು, ಸ್ಕ್ರೂ ಡ್ರೈವರ್ ನಿಂದ ಹಲ್ಲೆ ನಡೆಸಿರುವ ಭಯಾನಕ ಘಟನೆ ನಡೆದಿದೆ. ಅಲ್ಲದೇ, ರೂಮ್ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಬಿಹಾರ ರಾಜ್ಯದ ಬಕ್ಸಾರ್ ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಕಿರುಚಾಟ ಕಂಡು ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿ, ಬಾಗಿಲು ಮುರಿದು ಒಳಗೆ ನುಗ್ಗಿ ಮಹಿಳೆಯನ್ನು ರಕ್ಷಿಸಿದ್ದಾರೆ. ಕೂಡಲೇ ಹಲ್ಲೆಗೊಳಗಾಗಿದ್ದ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ವೈದ್ಯರು ಬರೋಬ್ಬರಿ 70 ಹೊಲಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯ ಪತಿ ತನ್ನ ಗರ್ಭಿಣಿ ಪತ್ನಿಯ ಮೇಲೆ ಹಲ್ಲೆ ನಡೆಸಿದಾಗ ಮಹಿಳೆಯ ಅತ್ತಿಗೆ ಮತ್ತು ಅತ್ತೆ ಮನೆಯಲ್ಲೇ ಇದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ. ತನ್ನ ಪತ್ನಿ ತಮಗೆ ಹೇಳದೆ ಮನೆಯಿಂದ ಹೊರಗೆ ಓಡಾಡುತ್ತಿದ್ದಳು ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.