ಏಕದಿನ ಕ್ರಿಕೆಟ್ನಲ್ಲಿ ಸತತ ಫಾರ್ಮ್ ವೈಫಲ್ಯಕ್ಕೆ ಸಿಲುಕಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಇವೆಲ್ಲದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್, ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಲಿದ್ದಾರೆ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಹೇಳಿದ್ದಾರೆ. 50 ಓವರ್ಗಳ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೂ ವಿಶ್ವಕಪ್ ತಂಡದಲ್ಲಿ ಸೂರ್ಯಕುಮಾರ್ ಸ್ಥಾನ ಪಡೆಯಲಿದ್ದಾರೆ ಎಂದು ಪ್ರಸಾಸ್ ಅಭಿಪ್ರಾಯಪಟ್ಟಿದ್ದಾರೆ.
ಟಿ20 ಕ್ರಿಕೆಟ್ ಮೂರು ಶತಕಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದರ ಪರಿಣಾಮವಾಗಿ ಸೂರ್ಯಕುಮಾರ್, 2021ರಲ್ಲಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಪಡೆದ್ದಾರೆ. ಇತ್ತೀಚಿನ ದಿನಗಳಲ್ಲಿ ಶುಭ್ಮನ್ ಗಿಲ್ ಅವರಿಗಿಂತಲೂ ಹೆಚ್ಚು ಏಕದಿನ ಪಂದ್ಯಗಳನ್ನ ಸೂರ್ಯಕುಮಾರ್ ಆಡಿದ್ದು, ಅವರ ಬ್ಯಾಟಿಂಗ್ ಸಾಮರ್ಥ್ಯ ಏನೆಂಬುದು ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಸಾಬೀತಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ಅವರ ಬ್ಯಾಟಿಂಗ್ ಅಂಕಿಅಂಶಗಳು ಏನೇ ಇದ್ದರು, ಸೂರ್ಯಕುಮಾರ್ ಟಿ20 ಕ್ರಿಕೆಟ್ನ ನಂ.1 ಬ್ಯಾಟರ್ ಆಗಿದ್ದಾರೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರು, ಅವರ ಸಾಮರ್ಥ್ಯವನ್ನ ಅರಿತು ತಂಡದ ಮ್ಯಾನೇಜ್ಮೆಂಟ್ ಅವರ ಬೆನ್ನಿಗೆ ನಿಂತಿದೆ. ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಅವರುಗಳ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ತಮಗೆ ದೊರೆತ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳದೆ ಇರುವುದು, ತಂಡದಲ್ಲಿ ಅವರ ಸ್ಥಾನದ ಬಗ್ಗೆ ಚರ್ಚೆಗೆ ಕಾರಣವಾಗಿದೆ ಎಂದಿದ್ದಾರೆ.








