ವಿಂಬಲ್ಡನ್ 2021- ಹುಲ್ಲು ಹಾಸಿನ ಅಂಗಣದಲ್ಲಿ ಫೆಡರರ್ ಗೆಲುವಿನ ಓಟ
ಸ್ವೀಜರ್ ಲೆಂಡ್ ನ ಟೆನಿಸ್ ಮಾಸ್ಟರ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಹಿರಿಯ ಆಟಗಾರ. ಅಲ್ಲದೆ 58ನೇ ಬಾರಿ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ರೋಜರ್ ಫೆಡರರ್ ಅವರು 7-5, 6-4, 6-2ರಿಂದ ಇಟಲಿಯ ಲಾರೆಂಝ್ ಸೊನೆಗೊ ಅವರನ್ನು ಮಣಿಸಿದ್ರು. ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಕನಸಿನಲ್ಲಿರುವ ರೋಜರ್ ಫೆಡರರ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೊಲೆಂಡ್ ನ ಹ್ಯುಬರ್ಟ್ ಹುರ್ಕಾಝ್ ಅವರನ್ನು ಎದುರಿಸಲಿದ್ದಾರೆ. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ ಅಂಗಣದಲ್ಲಿ ರೋಜರ್ ಫೆಡರರ್ ಅವರು ಎಂಟು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇನ್ನು ಪುರುಷರ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೊಲೆಂಡ್ ನ ಹ್ಯುಬರ್ಟ್ ಹುರ್ಕಾಝ್ 2-6, 7-6, 3-6, 6-3, 6-3ರಿಂದ ರಷ್ಯಾದ ಡೇನಿಲ್ ಮೆಡ್ವೆಡೋವ್ ಅವರನ್ನು ಪರಾಭವಗೊಳಿಸಿದ್ರು.
ಇನ್ನುಳಿದಂತೆ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕರೇನ್ ಖಾಚ್ನಾನೋವಾ ಮತ್ತು ಡೇನಿಸ್ ಶಪೋವಾಲೊವ್ ಹೋರಾಟ ನಡೆಸಿದ್ರೆ, ನೊವಾಕ್ ಜಾಕೊವಿಕ್ ಮತ್ತು ಮಾರ್ಟನ್ ಫ್ಯುಸೊವಿಕ್ಸ್ ಕಾದಾಟ ನಡೆಸಲಿದ್ದಾರೆ. ಹಾಗೇ ಮ್ಯಾಟೊ ಬೆರಾರ್ಟಿನಿ ಮತ್ತು ಫೆಲಿಕ್ಸ್ ನಡುವೆ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.