ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು. ನಿರ್ಮಾಪಕ, ರಾಜಕಾರಣಿ ಮುನಿರತ್ನ ಅವರ ಬರ್ತ್ ಡೇ ಗೆ ವಿಶ್ ಮಾಡಿದ್ದು, ಪಕ್ಷದ ಕಾರ್ಯಕರ್ತರ ಪಿತ್ತ ನೆತ್ತಗೇರುವಂತೆ ಮಾಡಿದೆ. “ಜೆಡಿಎಸ್ ಯುವರಾಜ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ಟೀಕೆಗಳನ್ನು ಮಾಡುತ್ತಿದ್ದಾರೆ. ಯುವಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದಲೇ ಹೊರಡಿ, ರಾಜಕೀಯದತ್ತ ಮತ್ತೆ ಸುಳಿಯಬೇಡಿ. ನೀವು ಸಿನಿಮಾ ಮಾಡ್ಕೊಂಡು ಆರಾಮಾಗಿರಿ”. ಎಂದೆಲ್ಲ ವಾರ್ನಿಂಗ್ ಮಾಡಿದ್ದರು. ಇದೀಗ ಪಕ್ಷದ ಕಾರ್ಯಕರ್ತರು ತಮ್ಮ ವಿರುದ್ಧ ಗರಂ ಆಗಿರುವುದನ್ನ ಅರಿತ ನಿಖಿಲ್ ಕುಮಾರಸ್ವಾಮಿ, ಫೇಸ್ ಬುಕ್ ನಲ್ಲಿ ಸಮಜಾಯಿಷಿ ಕೊಟ್ಟಿದ್ದಾರೆ.
“ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. ‘ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು‘ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ.
ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ. ಮೋದಿ ದೇವೇಗೌಡರಿಗೆ ಶುಭ ಕೋರುತ್ತಾರೆ. ಯಡಿಯೂರಪ್ಪನವರು ಕುಮಾರಸ್ವಾಮಿ ಅವರಿಗೆ ಶುಭ ಆಶಿಸುತ್ತಾರೆ. ಕುಮಾರಸ್ವಾಮಿ ಅವರೂ ಶುಭಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ.
ಮುನಿರತ್ನ ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಏನೇ ಮಾಡಿರಬಹುದು. ಅವುಗಳಿಗೆ ಕಣದಲ್ಲಿ ಉತ್ತರಿಸುವ ಪ್ರಯತ್ನ ಮಾಡೋಣ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತನಾಗಿ, ಯುವ ಜನತಾದಳದ ಮುಂದಾಳುವಾಗಿ ನನ್ನ ದುಡಿಮೆ ಪಕ್ಷಕ್ಕೆ ಮಾತ್ರ” ಎಂದಿದ್ದಾರೆ.
—————————————————————————————————————————————————————–
‘HALF CHITRANNA’ | KANNADA SHORT FILM 2020 | MANOJ P NADALUMANE, RITVIK MURALIDHAR.








