ಮುಂಬೈನಲ್ಲಿ 144 ಸೆಕ್ಷನ್ ಜಾರಿ, ವೀಕೆಂಡ್ ಮಸ್ತಿಗೆ ಬ್ರೇಕ್…..
ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಬೈನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 17 ಒಮಿಕ್ರಾನ್ ಪ್ರಕರಣಗಳು ಕಾಣಿಸಿಕೊಳ್ಳುವುದರಂದಿಗೆ ದೇಶದಲ್ಲಿ ಅತಿ ಹೆಚ್ಚು, ಓಮಿಕ್ರನ್ ಸೋಂಕು ಹೊಂದಿರುವ ರಾಜ್ಯವಾಗಿದೆ. ಈಗಾಗಿ ಇದನ್ನ ತಡೆಗಟ್ಟಲು ಮುಂಬೈ ನಿಷೇಧಾಜ್ಞೆಯ ಮೊರೆ ಹೋಗಿದೆ.
ಶುಕ್ರವಾರ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರದ ಏಳು ಹೊಸ ಪ್ರಕರಣಗಳು ವರದಿಯಾಗಿವೆ. ಮೂರು ವರ್ಷದ ಮಗು ಕೂಡ ಹೊಸ ರೂಪಾಂತರದಿಂದ ಪ್ರಭಾವಿತವಾಗಿದೆ. ಮೂರು ಪ್ರಕರಣಗಳು ಮುಂಬೈನಿಂದ ಮತ್ತು ನಾಲ್ಕು ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಶನ್ನಿಂದ ಬಂದಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಎಲ್ಲಾ ಮೂರು ಮುಂಬೈ ರೋಗಿಗಳು 48, 25 ಮತ್ತು 37 ವರ್ಷ ವಯಸ್ಸಿನ ಪುರುಷರು, ತಾಂಜಾನಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾಕ್ಕೆ ಅಂತರಾಷ್ಟ್ರೀಯ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ.
ಓಮಿಕ್ರಾನ್ ಕೇಸ್ ಗಳು ಮತ್ತಷ್ಟು ಹರಡುವಿಕೆಯನ್ನು ತಡೆಯಲು, ಮುಂಬೈನಲ್ಲಿ ರ್ಯಾಲಿಗಳು, ಮೋರ್ಚಾಗಳು ಅಥವಾ ಜನರು ಅಥವಾ ವಾಹನಗಳ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ. ಎರಡು ಕಾರಣಗಳಿಗಾಗಿ ನಗರದಲ್ಲಿ ಸೆಕ್ಷನ್ 144 ಹೇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಮೊದಲ ಕಾರಣವೆಂದರೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಯೋಜಿಸಿರುವ ರ್ಯಾಲಿಯಿಂದಾಗಿ ಹಲವಾರು ಕಾರ್ಯಕರ್ತರು ಮುಂಬೈಗೆ ಬರಲಿದ್ದಾರೆ ಮತ್ತು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಭಾಗವಹಿಸುವ ಸಾಧ್ಯತೆಯಿದೆ. ಓಮಿಕ್ರಾನ್ ಸೋಂಕಿನ ಕಾರಣದಿಂದ ಪೊಲೀಸರು ರ್ಯಾಲಿಗೆ ಅನುಮತಿ ನಿರಾಕರಿಸಿದ್ದಾರೆ ಆದರೆ AIMIM ಇನ್ನೂ ಅದನ್ನು ಮುಂದುವರೆಸುವ ಯೋಚನೆಯಲ್ಲಿದೆ .
ಇನ್ನೊಂದು ಕಡೆ ಸಂಜಯ್ ರಾವುತ್ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಸಹ ಪ್ರತಿಭಟನೆ ಹಮ್ಮಿಕೊಂಡಿದೆ ಇದು ಎರಡನೇ ಕಾರಣ.
ಇತ್ತೀಚಿನ ವರದಿಯ ಪ್ರಕಾರ ಭಾರತದ ಓಮಿಕ್ರಾನ್ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 17 ಪ್ರಕರಣಗಳು, ರಾಜಸ್ಥಾನದಲ್ಲಿ ಒಂಬತ್ತು ಪ್ರಕರಣಗಳು, ಗುಜರಾತ್, ಕರ್ನಾಟಕ ಮತ್ತು ದೆಹಲಿಯಲ್ಲಿ ಕ್ರಮವಾಗಿ ಮೂರು, ಎರಡು ಮತ್ತು ಒಂದು ಪ್ರಕರಣಗಳು ವರದಿಯಾಗಿವೆ.








