ಕೊನೆಗೂ ಅವರನ್ನು ನೇರವಾಗಿ ನೋಡಲಾಗಲೇ ಇಲ್ಲ; ನಾ.ಸು ಇಲ್ಲದ ಭರತನಹಳ್ಳಿ ಇದೇನು ವಿಧಿಯಾಟ?

1 min read
Marjala manthana Bharathanahalli master

ಕೊನೆಗೂ ಅವರನ್ನು ನೇರವಾಗಿ ನೋಡಲಾಗಲೇ ಇಲ್ಲ; ನಾ.ಸು ಇಲ್ಲದ ಭರತನಹಳ್ಳಿ ಇದೇನು ವಿಧಿಯಾಟ? Marjala manthana Bharathanahalli

ಮಾಧ್ಯಮರಂಗ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಆರು ದಶಕಗಳಿಂದ ಕ್ರಿಯಾಶೀಲರಾಗಿದ್ದ ಹಿರಿಯ ಸಾಹಿತಿ ಅಂಕಣಕಾರ ಹಾಗೂ ಪತ್ರಕರ್ತ ನಾರಾಯಣ ಸುಬ್ರಾಯ ಹೆಗಡೆ ಅಥವಾ ನಾ.ಸು ಭರತನಹಳ್ಳಿ. ಪ್ರಖರ ಆಧ್ಯಾತ್ಮ ಚಿಂತಕರೂ, ಸ್ವರ್ಣವಲ್ಲಿ ಶ್ರೀಗಳ ಆಪ್ತರೂ ಆಗಿದ್ದ 84 ವರ್ಷದ ಭರತನಹಳ್ಳಿ ಮೇಸ್ಟ್ರು ಶುಕ್ರವಾರದ ವೈಕುಂಠ ಏಕಾದಶಿಯ ದಿನ ವೈಕುಂಠವಾಸಿಗಳಾದರು. ಇದು ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಲಯಕ್ಕೆ ಆದ ಬಹು ದೊಡ್ಡ ನಷ್ಟ. ಇತ್ತೀಚೆಗಷ್ಟೆ ಪುತ್ರ ಮತ್ತು ಪತ್ನಿಯನ್ನು ಕಳೆದುಕೊಂಡಿದ್ದ ನಾ.ಸು ಭರತನಹಳ್ಳಿ ಇಹಲೋಕದ ವ್ಯಾಪಾರ ಮುಗಿಸಿಬಿಟ್ಟರು. Marjala manthana Bharathanahalli
Marjala manthana Bharathanahalli master

ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ನಿವಾಸಿ ನಾ.ಸು.ಭ ಕೇವಲ ಸಾಹಿತಿ, ಪತ್ರಕರ್ತ ಮಾತ್ರವಲ್ಲದೇ ಪ್ರಕಾಶಕರಾಗಿಯೂ 60 ವರ್ಷಗಳಿಗಿಂತ ಹೆಚ್ಚು ವರ್ಷ ಸಾಹಿತ್ಯದ ಸೇವೆ ಮಾಡಿದವರು. ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದ ಸ್ವರ್ಣವಲ್ಲೀ ಪ್ರಭಾ ಸಂಪಾದಕರಾಗಿ ಸುದೀರ್ಘ 21 ವರ್ಷ ಪತ್ರಿಕೆ ಮುನ್ನಡೆಸಿದ ಹೆಗ್ಗಳಿಕೆ ಅವರದ್ದು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅವರು ಕೈಯಾಡಿಸಿದವರು. ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 26 ಕ್ಕೂ ಹೆಚ್ಚು ಪುಸ್ತಕಗಳನ್ನು ನಾ.ಸು.ಭ ಬರೆದಿದ್ದಾರೆ. ವಿಚಾರ-ವಿಮರ್ಶೆ ಲೇಖನಗಳಂತಹ ಗಂಭೀರ ಸಾಹಿತ್ಯದ 16 ಪುಸ್ತಕಗಳೂ ನಾ.ಸು ಅವರ ಲೇಖನಿಯಿಂದ ರಚಿತವಾಗಲ್ಪಟ್ಟಿದೆ.

ಪ್ರತಿಷ್ಟಿತ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ವರದಿಗಾರರಾಗಿ, ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿ, ಆಕಾಶವಾಣಿಯ ಭಾಷಣಕಾರರಾಗಿ, ಮಾಧ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕೃಷಿ ಮಾಡಿದವರು ನಾ.ಸು ಮಾಸ್ತರ್. ಸನ್ಮತಿ ಎಂಬುವುದು ಅವರ ಜೀವನದ ಮಹತ್ವದ ಸಾಧನೆಯನ್ನು ಪ್ರಸ್ತುತ ಪಡಿಸುವ ಅಭಿನಂದನಾ ಗ್ರಂಥ. ಪ್ರೊಫೆಸರ್‌ ಜಿ.ಟಿ ಭಟ್ಟ ಹಾಸಣಗಿಯವರು ಅವ್ಯಾಹ ಪ್ರೀತಿ ಎನ್ನುವ ನಾ.ಸು ಭರತಹಳ್ಳಿವರ ಕುರಿತಾದ ಆಪ್ತ ಬರಹಗಳ ಪುಸ್ತಕವನ್ನು ಬರೆದಿದ್ದಾರೆ. ನಾ.ಸು.ಭ ಅವರು ಸಿದ್ಧಾಪುರದಲ್ಲಿ ನಡೆದಿದ್ದ 14ನೇ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು.
Marjala manthana Bharathanahalli

ಮೂರು ವರ್ಷಗಳ ಒಂದು ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನದೊಂದು ವಾರಾಂತ್ಯದ ವಿಶೇಷ ಎಪಿಸೋಡ್‌ ಪ್ರಸಾರವಾಗುತ್ತಿತ್ತು. ನಾನು ಕಾರ್ಯನಿರ್ವಹಿಸುತ್ತಿದ್ದ ಸಂಪಾದಕರ ಆಸಕ್ತಿಯ ಸಂಚಿಕೆಯದಾಗಿತ್ತು. ಅದೊಂದು ವಾರದ ಎಪಿಸೋಡ್‌ ಗೆ ಸಂಪಾದಕರು, ಮಲೆನಾಡಿಗೆ ಶನಿಯಂತೆ ಒಕ್ಕರಿಸಿದ ಅಕೇಶಿಯಾ ಬಗ್ಗೆ ಒಂದು ಸ್ಟೋರಿ ಮಾಡಲು ಹೇಳಿದ್ದರು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ತೀರ್ಥಹಳ್ಳಿ ಮಧ್ಯಾಹ್ನ ಸಾಗರ ಎಲ್ಲಾ ಸುತ್ತಿದ್ದಾಯ್ತು. ಕೊನೆಗೆ ಒಂದು ಬೈಟ್ ಮಾತ್ರ ಅತ್ಯಗತ್ಯವಾಗಿ ಬೇಕಿತ್ತು; ಅದು ನಮ್ಮ ಶಿವಾನಂದ ಕಳವೆಯವರದ್ದು. ಅವರಿದ್ದಿದ್ದು ಶಿರಸಿಯ ಕಾನ್ಮನೆಯಲ್ಲಿ. ಅದಾಗಲೇ ಸಂಜೆ 6 ಗಂಟೆ. ಕಾನ್ಮನೆ ತಲುಪುವಾಗ 8 ಆಗಿತ್ತೇನೋ.

ಅಲ್ಲಿ ಅವತ್ತು ಮಕ್ಕಳ ಪರಿಸರ ಕಾರ್ಯಾಗಾರ ನಡೆಯುತ್ತಿತ್ತು. ಸಾಗರದ ಪ್ರಜ್ಞಾವಂತ ಗೆಳೆಯ ಪೂರ್ಣಪ್ರಜ್ಞ ಬೇಳೂರು ಅಲ್ಲೇ ಇದ್ದರು. ಅಕೇಶಿಯಾದಿಂದ ಪರಿಸರ ಹಾನಿಯ ಬಗ್ಗೆ ಪುಸ್ತಕ ಬರೆದ ಶಿವಾನಂದ ಕಳವೆಯವರು ಬೈಟ್ ಕೊಟ್ಟರು. ಅದ್ಬುತವಾದ ರಾತ್ರಿಯೂಟವೂ ಆಯಿತು. ನಾವು ಅದೇ ರಾತ್ರಿ ಬೆಂಗಳೂರಿಗೆ ಹಿಂದಿರುಗುವ ಯೋಚನೆ ಮಾಡುತ್ತಿದ್ದರಿಂದ ಕಾನ್ಮನೆಯಿಂದ ಬೀಳ್ಕೊಟ್ಟೆವು. ಶಿರಸಿ ಬರುವ ದಾರಿಯಲ್ಲಿ ಪದೇ ಪದೇ ನಾ.ಸು ಮಾಸ್ತರ್ ನೆನಪಾಗುತ್ತಿದ್ದರು. ಕಾಲ್ ಮಾಡೋಣ ಅಂದುಕೊಂಡೆ ಆದರೆ ಅದಾಗಲೇ ರಾತ್ರಿ 10 ಆಗಿತ್ತು. ಪಾಪ ವೃದ್ಧ ದಂಪತಿಗಳು ಮಲಗಿರುತ್ತಾರೆ ಎಂದು ಸುಮ್ಮನಾದೆ.

ಅದಕ್ಕೂ ಮೊದಲು ಎರಡು ಮೂರು ಬಾರಿ ಅವರೊಂದಿಗೆ ಫೋನ್ ನಲ್ಲೇ ಮಾತಾಡಿದ್ದೆ ಅಷ್ಟೇ ನೇರವಾಗಿ ಭೇಟಿಯಾಗಿರಲಿಲ್ಲ. ನಾನು ಅಪರಿಚಿತನಾದರೂ ಸಾಹಿತ್ಯದ ಆಸಕ್ತ ಎಂದು ತಿಳಿಯುತ್ತಿದ್ದಂತೆ ಬಾಯಿ ತುಂಬಾ ಹರಟಿದ್ದರು ನಾ.ಸು ಮಾಸ್ತರ್. ಅವರು ಆಗಲೂ ವಿಜಯವಾಣಿಗೆ ಕಾಲಂ ಬರೆಯುತ್ತಿದ್ದರು. ಅವರ ಪರಂಪರೆ ಅಂಕಣವನ್ನು ನಾನು ಆಗಾಗ ಓದುವುದಿತ್ತು. ನಾನು ಸಿರಸಿಗೆ ಹೋಗುತ್ತಿದ್ದೇನೆ ಎಂದಾಗ ಅಲ್ಲೇ ಯಲ್ಲಾಪುರ ಭರತನಹಳ್ಳಿಗೆ ಹೋಗಿ ನಾ.ಸು ಅವರನ್ನು ಭೇಟಿಯಾಗು, ಅಬ್ಬೆ ಅದ್ಭುತವಾಗಿ ಮೆಲಾಗ್ರ ಮಾಡ್ತಾರೆ ಎಂದಿದ್ದ ಶಿರಸಿಯ ಒಬ್ಬ ಸಾಹಿತ್ಯ ಪ್ರೇಮಿ ಗೆಳೆಯ. ಆಗಿನ್ನೂ ಅಬ್ಬೇ ಬದುಕಿದ್ದರು; ನಾ.ಸು ಮಾಸ್ತರ್‌ ಲವಲವಿಕೆಯಿಂದ ಸಾಂಸ್ಕೃತಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಭರತನಹಳ್ಳಿ ನಾ.ಸು ಮನೆ ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದು ಎನ್ನುತ್ತಿದ್ದ ಆ ಗೆಳೆಯ. ಅವತ್ತು ರಾತ್ರಿ ಸಿರಸಿಯಿಂದ ಬೆಂಗಳೂರಿಗೆ ವಾಪಾಸಾಗಲು ಕ್ಯಾಮರಾಮನ್‌ ಮುರುಳಿಯಾಗಲೀ ನಮ್ಮ ಡ್ರೈವರ್‌ ಮಾರುತಿಯಾಗಲೀ ಒಪ್ಪಲೇ ಇಲ್ಲ. ವಿಪರೀತ ಸುಸ್ತಾಗಿದ್ದರು ಅವರು. ಮತ್ತೆ ಬೆಂಗಳೂರಿನತ್ತ ವಾಹನ ಚಲಾಯಿಸುವ ಚೈತನ್ಯ ಅವರಲ್ಲಿರಲಿಲ್ಲ. ಹೀಗಾಗಿ ಸಿರಸಿಯಲ್ಲೇ ಲಾಡ್ಜ್‌ ನಲ್ಲಿ ಮಲಗಿದೆವು.
Marjala manthana Bharathanahalli

ವಾಪಾಸು ಬೆಂಗಳೂರಿಗೆ ಬಂದ ನಂತರ ನಾ.ಸು ಮಾಸ್ತರ್‌ ಬಳಿ ಹೀಗೆ ಸಿರಸಿಗೆ ಬಂದಿದ್ದೆ ಎಂದ ಕೂಡಲೇ ಹತ್ತಿರದಲ್ಲೇ ಇದ್ದ ಯಲ್ಲಾಪುರಕ್ಕೆ ಬಂದು ಭರತನಹಳ್ಳಿ ಮನೆಯಲ್ಲಿ ಉಳಿಯಬಹುದಿತ್ತು ಒಂದು ಕರೆ ಮಾಡಿ ಬರಬಹುದಿತ್ತಲ್ಲ ಎಂದಿದ್ದರು. ಅವರನ್ನು ಭೇಟಿ ಮಾಡಿ ಮಾತಾಡಬೇಕೆನ್ನುವ ಬಯಕೆ ಅವತ್ತು ತೀರಾ ಕಾಡಿತ್ತು ಆದರೆ ಈಡೇರಲಿಲ್ಲ. ಅದಾದ ನಂತರ ರವಿ ಬೆಳೆಗೆರೆಯವರು ತಮ್ಮ ಜೋಯಿಡಾದ ಎಸ್ಟೇಟ್‌ ಗೆ ಕರೆದುಕೊಂಡು ಹೋಗುತ್ತೀನೆಂದು ಪ್ರಾಮಿಸ್‌ ಮಾಡಿದ್ದರು. ಹಾಗೇ ಹೋಗುವಾಗ ಭರತನಹಳ್ಳಿಗೆ ಹೋಗಿ ಅಬ್ಬೆಯ ಕೈನಲ್ಲಿ ಕಾಫಿ ಕಾಯಿಸಿ ಕುಡಿದು ಹೋಗೋಣ ಎಂದಿದ್ದರು. ನಾ.ಸು ಅವರನ್ನು ಮಾತಾಡಿಸಿ ಹೋದರೇ ಅದೇನೋ ಸಮಾಧಾನ ಎಂದಿದ್ದರು. ನಾನು ಜೋಯಿಡಾಗೆ ಹೋಗುವ ದಿನವನ್ನು, ಭರತನಹಳ್ಳಿ ಹೊಕ್ಕು ನಾ.ಸು ಜೊತೆ ಪಟ್ಟಂಗ ಹೊಡೆಯುವ ದಿನವನ್ನು ಕಾಯುತ್ತಿದ್ದೆ. ಈ ದರಿದ್ರ ಕರೋನಾ ಒಕ್ಕರಿಸಿಕೊಂಡ ನಂತರ ಬೆಳಗೆರೆ ಜೋಯಿಡಾಗೂ ಹೋಗಲಿಲ್ಲ, ನನ್ನನ್ನು ನಾ.ಸು ಜೊತೆ ಭೇಟಿಯೂ ಮಾಡಿಸಲಿಲ್ಲ. ಲೋಕವನ್ನೇ ತೋರೆದು ಹೋದರು. ಈಗ ನಾ.ಸು ಸಹ ಹೋದರು. ಜೀವನದಲ್ಲಿ ಒಮ್ಮೆಯೂ ನಾ.ಸು ಮಾಸ್ತರ್‌ ರನ್ನು ಭೇಟಿ ಮಾಡಿಸದ ವಿಧಿಯನ್ನು ಏನೆಂದು ಶಪಿಸಲಿ.
Marjala manthana Bharathanahalli

ಭರತನಹಳ್ಳಿಯ ನಾ.ಸು ಮನೆ ಸಾಲು ಸಾಲು ದುರಂತಗಳನ್ನು ಕಂಡಿದೆ. ಯಾವುದೇ ದುರಭ್ಯಾಸಗಳಿರದಿದ್ದ ಮಗ ರಾಘವ ಏಕಾಏಕಿ ಹೃದಯಾಘಾತದಿಂದ ಹೋಗಿಬಿಟ್ಟರು. ಅದೇ ಕೊರಗಿನಲ್ಲಿ ಅಬ್ಬೇ ಹೋಗಿ ವರ್ಷ ಕಳೆದಿರಲಿಲ್ಲವೇನೋ ಈಗ ನಾ.ಸು ಭರತನಹಳ್ಳಿ ಮಾಸ್ತರ್‌ ಸಹ ಅವರ ಹಿಂದೆಯೇ ಹೋರಟರು; ವೈಕುಂಠ ಏಕಾದಶಿಯಂದು ಪರಲೋಕದ ಯಾತ್ರೆಗೆ ಹೊರಟರು ನಾ.ಸು.ಭರತನಹಳ್ಳಿ.

ಮಾಧ್ಯಮ ಅಕಾಡೆಮಿ, ಕರ್ನಾಟಕ ಶ್ರೀ, ಕಯ್ಯಾರ ಕಿಂಞಣ್ಣ ರೈ ಪ್ರಶಸ್ತಿ, ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಸುವರ್ಣ ಗೌರವ ಸೇರಿದಂತೆ ಹತ್ತು ಹಲವು ಗೌರವಗಳು ನಾ.ಸು ಭರತನಹಳ್ಳಿಯವರನ್ನು ಅರಸಿಕೊಂಡು ಬಂದಿತ್ತು. ಈ ಕರೋನಾ ಸಂಕಷ್ಟ ವರ್ಷದಲ್ಲೇ ರವಿ ಬೆಳಗೆರೆಯವರ ದೇಹಾಂತ್ಯವಾದ ಸಂಧರ್ಭದಲ್ಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ಸ್ನೇಹಜೀವಿ ಅವರು. ಸರಳ, ಸಜ್ಜನ, ಸ್ನೇಹಮಯಿ ವ್ಯಕ್ತಿತ್ವದ ವಿದ್ವಾಂಸ ನಾ.ಸು ಭ ತಮ್ಮ ಅಪಾರ ಆತ್ಮೀಯರನ್ನು ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಪ್ರಕೃತಿ-ವಿಕೃತಿ ಪುಸ್ತಕ ತೆರೆದು ಕುಳಿತಿದ್ದೇನೆ. ನಾ.ಸು ಭರತನಹಳ್ಳಿ ಅವರು ಕೊನೆಗೂ ನೀನು ಭರತನಹಳ್ಳಿ ಬರಲೇ ಇಲ್ಲ ನೋಡು ತಮ್ಮಾ ಎಂದು ಅಣಕಿಸಿದಂತಾಗುತ್ತಿದೆ.

ವಿಭಾ (ವಿಶ್ವಾಸ್‌ ಭಾರದ್ವಾಜ್)
ಮಾರ್ಜಾಲ ಮಂಥನ
***

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd