ಪ್ರೀತಿಸಿ, ಕಾಳಜಿ ವಹಿಸಿ, ಜೀವಗಳನ್ನು ಉಳಿಸಿ: ಡಾ ಅರವಿಂದ್ ಎಸ್ ಟಿ

1 min read
World Suicide Prevention Day - with love and care Save lives

ಪ್ರೀತಿಸಿ, ಕಾಳಜಿ ವಹಿಸಿ, ಜೀವಗಳನ್ನು ಉಳಿಸಿ:
ಡಾ ಅರವಿಂದ್ ಎಸ್ ಟಿ

(ಸೆಪ್ಟೆಂಬರ್ 10 – ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಪ್ರಯುಕ್ತ ವಿಶೇಷ ಬರಹ)

ಸೆಪ್ಟೆಂಬರ್‌ 10 – ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ. ಈ ಹೆಸರು ಕೇಳುವಾಗ ವಿಚಿತ್ರವೆನಿಸಿದರೂ ಸಾಮಾನ್ಯ ಆರೋಗ್ಯವಂತ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಐದು ಬಾರಿಯಾದರೂ ಆತ್ಮಹತ್ಯೆ ಕುರಿತು ಯೋಚಿಸಿರುತ್ತಾನೆ ಎಂದು ತಿಳಿದಾಗ ಈ ದಿನದ ಅಗತ್ಯತೆ ಬಗ್ಗೆ ಅರಿವಾಗುತ್ತದೆ. ಸಕಾರಾತ್ಮಕ ಆಲೋಚನೆ, ಧನಾತ್ಮಕ ನಿಲುವು ಮತ್ತು ಸೂಕ್ತ ಮನೋವೈದ್ಯಕೀಯ ಚಿಕಿತ್ಸೆಯಿಂದ ಆತ್ಮಹತ್ಯೆ ತಡೆಗಟ್ಟಬಹುದು
World Suicide Prevention Day - with love and care Save lives
ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಅಂತರರಾಷ್ಟ್ರೀಯ ಸಂಘವು ಜಾಗತಿಕ ಮಟ್ಟದಲ್ಲಿ ಆತ್ಮಹತ್ಯೆ ಜಾಗೃತಿ ಮತ್ತು ತಡೆಗಟ್ಟಲು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಣೆಗೆ ತಂದಿದೆ. ಅದರ ಈ ವರ್ಷದ ‘ಥೀಮ್’ ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಾರ್ಷಿಕವಾಗಿ ಪ್ರಪಂಚದಲ್ಲಿ ಸರಿಸುಮಾರು ಎಂಟರಿಂದ ಹತ್ತು ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಮತ್ತು ಪ್ರತಿ ಮೂರು ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಬಗ್ಗೆ ಆಲೋಚಿಸುತ್ತಿದ್ದಾರೆ. 2012ರಲ್ಲಿ ಭಾರತವು ಆತ್ಮಹತ್ಯೆಗಳಲ್ಲಿ ವಿಶ್ವದಲ್ಲೇ  ನಂಬರ್ 1 ಸ್ಥಾನದಲ್ಲಿತ್ತು. ನಮ್ಮ ದೇಶದಲ್ಲಿ ಪ್ರತಿ 55 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಹತಾಶ ಭಾವನೆಯಿಂದ ಆತ್ಮಹತ್ಯೆಗೆ ಶರಣಾಗುವ ಆತಂಕಕಾರಿ ಮಾಹಿತಿ ಹೊರಬಿದ್ದಿತ್ತು.

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಸಿಆರ್‌ಬಿಯ ಅಂಕಿಅಂಶಗಳ ಪ್ರಕಾರ, 2019ರಲ್ಲಿ ಅಖಿಲ ಭಾರತ ಆತ್ಮಹತ್ಯೆ ದರಕ್ಕೆ (ಶೇ.10.4) ಹೋಲಿಸಿದರೆ ನಗರಗಳಲ್ಲಿ ಆತ್ಮಹತ್ಯೆ ಪ್ರಮಾಣ (ಶೇ. 13.9) ಹೆಚ್ಚಾಗಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರು ಪ್ರಮಾಣ ಶೇ. 53.6, ವಿಷ ಸೇವಿಸುವವರು ಶೇ. 25.8, ನೀರಿಗೆ ಬಿದ್ದು ಮುಳುಗಿ ಆತ್ಮಹತ್ಯೆ ಮಾಡುವವರು ಶೇ. 5.2 ಮತ್ತು ಶೇ. 3.8 ತಮಗೆ ತಾವೇ ಅಗ್ನಿಸ್ಪರ್ಶದ ಮೂಲಕ ಬದುಕಿಗೆ ಇತಿ ಶ್ರೀ ಹಾಡುವವರು ಎನ್ನುವ ಅಧ್ಯಯನದ ಡೇಟಾ ಮಾಹಿತಿ ಪ್ರಕಟವಾಗಿದೆ. ಕೌಟುಂಬಿಕ ಸಮಸ್ಯೆಗಳು (ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊರತುಪಡಿಸಿ) ಶೇ 32.4 ರಷ್ಟು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ. ಮದುವೆಗೆ ಸಂಬಂಧಿಸಿದ  ಸಮಸ್ಯೆಗಳು (ಶೇ 5.5) ಮತ್ತು ಅನಾರೋಗ್ಯ (ಶೇ .17.1) ಒಟ್ಟಾಗಿ 2019 ರಲ್ಲಿ ದೇಶದ ಒಟ್ಟು ಆತ್ಮಹತ್ಯೆಗಳು ಶೇಕಡಾ 55 ರಷ್ಟಿತ್ತು ಎಂದು ತನ್ನ ವರದಿಯಲ್ಲಿ ಹೇಳಿದೆ. ಪ್ರತಿ 100 ಆತ್ಮಹತ್ಯೆ ಸಾವುಗಳಲ್ಲಿ 70.2 ಪುರುಷರು ಮತ್ತು 29.8 ಮಹಿಳೆಯರಿದ್ದಾರೆ ಎಂದು ಪೊಲೀಸ್ ಡೇಟಾ ಹೇಳುತ್ತದೆ. ಸುಮಾರು 68.4 ಪ್ರತಿಶತ ಪುರುಷ ಸಂತ್ರಸ್ತರು ವಿವಾಹವಾದವರು ಆಗಿದ್ದರೆ, ಈ ಅನುಪಾತದಲ್ಲಿ ಮಹಿಳೆಯರ ಪ್ರಮಾಣ 62.5 ಶೇಕಡಾ ಎಂದು ಡೇಟಾದಲ್ಲಿ ಹೇಳಲಾಗಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿನ ಆತ್ಮಹತ್ಯೆಗಳು ಅಂದರೆ 13.6 ಶೇಕಡಾದಷ್ಟು ವರದಿಯಾಗಿವೆ, ಆ ನಂತರದ ಸ್ಥಾನದಲ್ಲಿ ಪಕ್ಕದ ತಮಿಳುನಾಡು ಇದ್ದು,  ಶೇ. 9.7ರಷ್ಟು ಆತ್ಮಹತ್ಯೆ ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ. 9.1, ಮಧ್ಯಪ್ರದೇಶದಲ್ಲಿ ಶೇ 9ರಷ್ಟು ಮತ್ತು ನಮ್ಮ ಕರ್ನಾಟಕದಲ್ಲಿ ಶೇ. 8.1ರಷ್ಟು ಆತ್ಮಹತ್ಯೆಗಳು ವರದಿಯಾಗಿವೆ. ದೇಶದಲ್ಲಿ ಈ ಐದು ರಾಜ್ಯಗಳಿಂದ ವರದಿಯಾದ ಒಟ್ಟು ಆತ್ಮಹತ್ಯೆಗಳ ಪ್ರಮಾಣ ಶೇಕಡಾ 49.5 ರಷ್ಟಿದ್ದರೆ  ಉಳಿದ  ಶೇ 50.5 ರಷ್ಟು ಆತ್ಮಹತ್ಯೆಗಳು ಉಳಿದ 24 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿವೆ. ಉತ್ತರ ಪ್ರದೇಶವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಹಾಗೂ ಆತ್ಮಹತ್ಯೆಗಳ ಪ್ರಮಾಣ ಅಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ತಮಿಳುನಾಡಿನಲ್ಲಿ 16 ಮತ್ತು ಆಂಧ್ರಪ್ರದೇಶದಲ್ಲಿ 14, ಕೇರಳದಲ್ಲಿ 11, ಪಂಜಾಬ್ ನಲ್ಲಿ 9 ಮತ್ತು ರಾಜಸ್ಥಾನ 7 ಗರಿಷ್ಠ ಸಾಮೂಹಿಕ/ಕೌಟುಂಬಿಕ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿವೆ ಎಂದು ಅಂಕಿ ಅಂಶಗಳು ತೋರಿಸಿದೆ.

ಶಿಕ್ಷಣದ ವಿಷಯವನ್ನಿಟ್ಟುಕೊಂಡು ಗಮನಿಸುವುದಾದರೇ, ಆತ್ಮಹತ್ಯೆಗೆ ಬಲಿಯಾದವರಲ್ಲಿ ಶೇಕಡಾ 12.9 ರಷ್ಟು ಅನಕ್ಷರಸ್ಥರು. ಪ್ರಾಥಮಿಕ ಹಂತದವರೆಗೆ ಶೇಕಡಾ 16.3, ಮಧ್ಯಮ ಮಟ್ಟದಿಂದ ಶೇಕಡಾ 19.6 ಮತ್ತು ಮೆಟ್ರಿಕ್ ಹಂತದವರೆಗೆ ಕಲಿತವರು ಶೇಕಡಾ 23.3ರಷ್ಟು ಆಗಿದ್ದಾರೆ. ಒಟ್ಟು ಆತ್ಮಹತ್ಯೆಗೆ ಬಲಿಯಾದವರಲ್ಲಿ ಕೇವಲ 3.7 ಶೇಕಡಾ ಪದವೀಧರರು ಮತ್ತು ಉನ್ನತ ಪದವೀಧರರು ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನುವ ಸಂಗತಿ ಕೂಡ ಈ ವರದಿಯಲ್ಲಿದೆ.

ಆತ್ಮಹತ್ಯೆಯ ಆಲೋಚನೆಗಳು ಅತ್ಯಂತ ಸಂಕೀರ್ಣ:

ಆತ್ಮಹತ್ಯೆಗೆ ಕಾರಣವಾಗುವ ಅಂಶಗಳು ಮತ್ತು ಕಾರಣಗಳು ಸಂಕೀರ್ಣ ಮತ್ತು ಬಹಳಷ್ಟು ಇವೆ. ಸಾಮಾನ್ಯವಾಗಿ ಆತ್ಮಹತ್ಯೆಗೆ ಯೋಚಿಸುವ ಎಲ್ಲರಿಗೂ ಒಂದೇ ತರಹದ ಕಾರಣಗಳಿರುವುದಿಲ್ಲ. ಅವು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತವೆ. ನಮಗೆ ತಿಳಿದಿರುವ ಸರಳ ಸಂಗತಿಯೆಂದರೆ, ಕೆಲವು ಘಾಸಿಮಾಡುವ ವಿಚಾರಗಳು ಮತ್ತು ಜೀವನದ ಒಂದು ಹತಾಶ ಘಟನೆ ಆತ್ಮಹತ್ಯೆಗೆ ಆಲೋಚಿಸುವಂತೆ ಅವರನ್ನು ದುರ್ಬಲಗೊಳಿಸುತ್ತದೆ. ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸ್ಥಿತಿಗಳು ಸಹ ಆತ್ಮಹತ್ಯೆಗೆ ಪ್ರೇರೇಪಿಸಬಹುದು. ಆತ್ಮಹತ್ಯೆ ಯೋಚನೆಗೆ ಒಳಗಾಗುವ ವ್ಯಕ್ತಿಗಳು ತಮ್ಮ ಸ್ನೇಹಿತರು, ಕುಟುಂಬ ಮತ್ತು ಸುತ್ತಮುತ್ತಲಿನವರಿಗೆ ತಾವು ಹೊರೆಯಾಗಿದ್ದೇವೆ ಎಂದು ಭಾವಿಸುತ್ತಾರೆ.  ಬಹುತೇಕರು ಒಬ್ಬಂಟಿಯಾಗಿದ್ದು, ಈ ಒಂಟಿತನವೇ ಅವರ ಮನಸನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಕೋವಿಡ್ ಸಾಂಕ್ರಾಮಿಕವು ಕೂಡಾ ಪ್ರತ್ಯೇಕತೆ ಮತ್ತು ದುರ್ಬಲತೆಯ ಭಾವನೆಗಳನ್ನು ಹೆಚ್ಚಿಸಲು ದೊಡ್ಡ ಕೊಡುಗೆ ನೀಡಿದೆ. ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವ ಮೂಲಕ, ಆತ್ಮಹತ್ಯಾ ಆಲೋಚನೆಗಳಲ್ಲಿ ತೊಡಗಿರುವ ಜನರಿಗೆ ನಾವು ಅವರ ಕಾಳಜಿ ವಹಿಸುತ್ತೇವೆ ಮತ್ತು ಅವರಿಗೆ  ಬೆಂಬಲವಾಗಿ ನಿಲ್ಲಲು ಬಯಸುತ್ತೇವೆ ಎಂದು ಅವರಲ್ಲಿ ಖಾತ್ರಿ ಮಾಡಿಸಬೇಕಿದೆ.

ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ 2021:

ವಿಶ್ವಾದ್ಯಂತ ಪ್ರತಿ 100 ಸಾವುಗಳಲ್ಲಿ ಒಂದು ಆತ್ಮಹತ್ಯೆಯ ಪರಿಣಾಮವಾಗಿದೆ. ಇದು ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರಬಹುದು. ಪ್ರತಿಯೊಂದು ಆತ್ಮಹತ್ಯೆಯೂ ವಿನಾಶಕಾರಿ ಮತ್ತು ಅವರ ಸುತ್ತಮುತ್ತಲಿನವರ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಆದಾಗ್ಯೂ, ಜಾಗೃತಿ ಮೂಡಿಸುವ ಮೂಲಕ, ಆತ್ಮಹತ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಮತ್ತು ಉತ್ತಮ ತಿಳುವಳಿಕೆಯುಳ್ಳ ಕ್ರಿಯೆಯನ್ನು ಪ್ರೋತ್ಸಾಹಿಸುವ ಮೂಲಕ, ನಾವು ಪ್ರಪಂಚದಾದ್ಯಂತ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಬಹುದು. ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವು ಆತ್ಮಹತ್ಯೆಯ ಅರಿವು ಮೂಡಿಸಲು  ಒಂದು ಅವಕಾಶವಾಗಿದ್ದು ಅದು ಜಾಗತಿಕವಾಗಿ ಆತ್ಮಹತ್ಯೆ ಮತ್ತು ಆತ್ಮಹತ್ಯೆಯ ಪ್ರಯತ್ನಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು ಎಂದರೆ ಆತ್ಮಹತ್ಯೆಗೆ ಬದಲು ಬದುಕಿನ ಪರ್ಯಾಯ ಮಾರ್ಗಗಳನ್ನು ನೆನಪಿಸಿ ಆತ್ಮವಿಶ್ವಾಸ ಮತ್ತು ಬದುಕಿನ ಬೆಳಕನ್ನು ಹಾಯಿಸುವುದು. ಈ ಗುರಿ ಹೊಂದಿರುವ ಸಂಸ್ಥೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ನಾವು ಕೈಗೊಳ್ಳುವ ಕಾರ್ಯಗಳು ಅದೆಷ್ಟೇ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ಕಷ್ಟದಲ್ಲಿರುವವರಿಗೆ ಭರವಸೆ ನೀಡುವುದನ್ನು ಆದ್ಯತೆಯನ್ನಾಗಿಸಿಕೊಳ್ಳಬೇಕು. ಸಾಮಾನ್ಯವಾಗಿ ಆತ್ಮಹತ್ಯೆಯನ್ನು ತಡೆಗಟ್ಟುವುದು ಸಾಧ್ಯವಿದೆ. ನಾವು ಮಾಡುವ ಒಂದು ಕೆಲಸ ಖಿನ್ನತೆಗೊಳಗಾದವರ ಕರಾಳ ಕ್ಷಣಗಳನ್ನು ದೂರ ಮಾಡಬಹುದು. ಈ ಸ್ವಾಸ್ಥ್ಯ ಸಮಾಜದ ಸದಸ್ಯರಾಗಿ, ಮಗುವಿನಂತೆ, ಪೋಷಕರಂತೆ, ಸ್ನೇಹಿತರಂತೆ, ಸಹೋದ್ಯೋಗಿಯಾಗಿ ಅಥವಾ ನೆರೆಯವರಾಗಿ ನಾವು ಈ ಕೆಲಸ ಮಾಡಬಹುದು. ಆತ್ಮಹತ್ಯೆಯ ಬಿಕ್ಕಟ್ಟನ್ನು ಅನುಭವಿಸುತ್ತಿರುವವರನ್ನು ಅಥವಾ ಆತ್ಮಹತ್ಯೆಯಿಂದ ನೊಂದವರ ಜೊತೆ ನಾವಿದ್ದೇವೆ ಎಂದು ನಿಲ್ಲುವ ತುರ್ತಿನ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಬಹುದು. ಇದು ಆತ್ಮಹತ್ಯೆ ಆಲೋಚನೆಯಲ್ಲಿರುವವರಿಗೆ ನೆರವಿನ ಭರವಸೆ ನೀಡುವ ಮೂಲಕ ಅವರಲ್ಲಿ ಧನಾತ್ಮಕ ಚಿಂತನೆ ಮೂಡಿಸಬೇಕು.
World Suicide Prevention Day - with love and care Save lives
ಆತ್ಮಹತ್ಯೆಗೆ ಪ್ರಮುಖವಾದ ಕಾರಣ; ಮಾನಸಿಕ ಆರೋಗ್ಯದ ಬಗ್ಗೆ ಸಮಾಜ ಹೊಂದಿರುವ ನಿರ್ಲಕ್ಷ ಧೋರಣೆ ಹಾಗೂ ಸಮಯಕ್ಕೆ ಸರಿಯಾಗಿ ತಜ್ಞ ಮನೋವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದಿರುವುದು. ಮಾನಸಿಕ ಅನಾರೋಗ್ಯದ ಪ್ರಮುಖ ಲಕ್ಷಣಗಳು ಹೀಗಿರುತ್ತವೆ.

1. ಸದಾ ಬೇಸರದಿಂದಿರುವುದು
2. ನಿದ್ರಾಹೀನತೆ
3. ಜೀವನದಲ್ಲಿ ಆಸಕ್ತಿ ಹಾಗೂ ಉತ್ಸಾಹದ ಕೊರತೆ
4. ನಕಾರಾತ್ಮಕ ಚಿಂತನೆ ಹಾಗೂ ಭವಿಷ್ಯದ ಬಗ್ಗೆ ನಿರಾಶಾಭಾವನೆ.
5. ಮದ್ಯಪಾನ ಹಾಗೂ ಇನ್ನಿತರೆ ವ್ಯಸನಗಳು
6. ಭ್ರಮೆ ಹಾಗೂ ಇನ್ನಿತರ ತೀವ್ರ ಮಾನಸಿಕ ಸಮಸ್ಯೆಗಳು.

ನಮ್ಮ ಅಕ್ಕ ಪಕ್ಕ ಇರುವ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ, ಮೇಲ್ಕಂಡ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ನಾವು ಅವರೊಡನೆ ಸಮಾಲೋಚನೆ ಮಾಡಬೇಕು. ಆದಷ್ಟು ಧೈರ್ಯ ಹಾಗೂ ಸಾಂತ್ವನ ಹೇಳಬೇಕು. ಆದರೂ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ನಿಮಗೆ ಅನಿಸಿದಲ್ಲಿ ತಜ್ಞವೈದ್ಯರ ಬಳಿ ಆಪ್ತ ಸಮಾಲೋಚನೆ ಹಾಗೂ ಮನೋವೈದ್ಯಕೀಯ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬಾರದು.

ಒಬ್ಬ ವ್ಯಕ್ತಿಗೆ ಆತ್ಮಹತ್ಯೆ ಆಲೋಚನೆ ಬರಲು ಅವನ ಪರಿಸ್ಥಿತಿಯ ಜೊತೆಗೆ ಮೆದುಳಿನಲ್ಲಿ ಆಗುವ ರಾಸಾಯನಿಕ ಕ್ರಿಯೆಗಳ ಪ್ರಮುಖ ಬದಲಾವಣೆಗಳೇ ಕಾರಣ. ಮನೋವೈದ್ಯಕೀಯ ಆಪ್ತ ಸಮಾಲೋಚನೆ, ಮಾತ್ರೆಗಳು ಹಾಗೂ ಅಗತ್ಯ ಬಿದ್ದಲ್ಲಿ ವಿದ್ಯುತ್ ಕಂಪನ ಚಿಕಿತ್ಸೆಯಿಂದ ಆತ್ಮಹತ್ಯೆ ಆಲೋಚನೆಯನ್ನು ತಡೆಗಟ್ಟಬಹುದು ಹಾಗೂ ಒಂದು ಜೀವವನ್ನು ಮತ್ತು ಅವರನ್ನು ನಂಬಿದ ಕುಟುಂಬವನ್ನು ಉಳಿಸಬಹುದು.

ಡಾ.ಅರವಿಂದ್. ಎಸ್.ಟಿ
ಖ್ಯಾತ ಮನೋವೈದ್ಯ ತಜ್ಞ, ಪಾಸಿಟಿವ್ ಮೈಂಡ್ ಆಸ್ಪತ್ರೆ, ದುರ್ಗಿಗುಡಿ, ಶಿವಮೊಗ್ಗ
9686091770
08182223445

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd