ವಿಶ್ವ ಟೂರ್ ಫೈನಲ್ಸ್ : ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸಿಂಧುಗೆ ಸೋಲು Sindu saakshatv
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ ಸಿಂಧು ಅವರು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ವಿಶ್ವ ಟೂರ್ ಫೈನಲ್ಸ್ ನ ಫೈನಲ್ ನಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ.
ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 16-21, 12-21 ರಿಂದ ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ವಿರುದ್ಧ 39 ನಿಮಿಷಗಳ ಹೋರಾಟದಲ್ಲಿ ಸೋಲು ಕಂಡರು.
ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸಿಂಧು ಮೊದಲ ಗೇಮ್ ನ ಆರಂಭದಿಂದಲೂ ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಈ ಪಂದ್ಯದ ಯಾವುದೇ ಹಂತದಲ್ಲೂ ಎದುರಾಳಿ ಆಟಗಾರ್ತಿಯ ರಣ ತಂತ್ರವನ್ನು ಮೆಟ್ಟಿನಿಲ್ಲುವಲ್ಲಿ ಅವರು ಸಫಲರಾಗಲಿಲ್ಲ. ಪರಿಣಾಮ ಮೊದಲ ಗೇಮ್ ಸುಲಭವಾಗಿ ಕೊರಿಯಾ ಆಟಗಾರ್ತಿ ಗೆದ್ದರು.
ಎರಡನೇ ಗೇಮ್ ನ ಆರಂಭದಲ್ಲಿ ಸಿಂಧು ಸ್ಥಿರ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವತ್ತ ಚಿತ್ತ ನೆಟ್ಟರು. ಆದರೆ ಇವರ ಹೋರಾಟಕ್ಕೆ ಫಲ ಲಭಿಸಲಿಲ್ಲ. ಆರಂಭದಲ್ಲಿ ಕೊಂಚ ಹೋರಾಟ ನೀಡಿದ ಸಿಂಧು ನಂತರ ಅಂಕಗಳನ್ನು ಬಿಟ್ಟು ಕೊಟ್ಟು ಪಂದ್ಯವನ್ನು ಸೋತು ನಿರಾಸೆ ಅನುಭವಿಸಿದರು.
ಇನ್ನು ಪುರುಷರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಡೆನ್ಮಾರ್ಕ್ ನ ವಿಕ್ಟರ್ ಆಕ್ಸೆಲ್ಸೆನ್ 21-12, 21-8ರಿಂದ ಥಾಯ್ಲೆಂಡ್ ನ ಕುನ್ಲವುಟ್ ವಿಟಿಡ್ಸಾರ್ನ್ ವಿರುದ್ಧ 43 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು.