ಅಗಸ್ಟ್ 10ಕ್ಕೆ ಜಗತ್ತಿನ ಮೊದಲ ಕೋವಿಡ್ ಲಸಿಕೆಯ ಘೋಷಣೆ ಸಾಧ್ಯತೆ
ಮಾಸ್ಕೋ, ಅಗಸ್ಟ್ 1: ಹಲವಾರು ದೇಶಗಳು ಕೊರೋನವೈರಸ್ ಪ್ರಕರಣಗಳ ವಿರುದ್ಧ ಹೋರಾಡುತ್ತಿರುವಾಗ, ಅಗಸ್ಟ್ 10ಕ್ಕೆ ಕೋವಿಡ್ -19 ಲಸಿಕೆಯ ಘೋಷಣೆ ಮಾಡುವುದಾಗಿ ರಷ್ಯಾ ಘೋಷಿಸಿದೆ. ರಷ್ಯಾ ಅಗಸ್ಟ್ 10ರಂದು ಲಸಿಕೆಯನ್ನು ಅನುಮೋದಿಸಿದರೆ ಜಗತ್ತಿನ ಮೊದಲ ಲಸಿಕೆ ಅಭಿವೃದ್ಧಿ ಪಡೆಸಿದ ವಿಶ್ವದ ಮೊದಲ ರಾಷ್ಟ್ರವಾಗಲಿದೆ.
ಮಾಸ್ಕೋ ಮೂಲದ ಗಮಲೇಯ ಇನ್ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ ಲಸಿಕೆಯನ್ನು ಆಗಸ್ಟ್ 10 ರೊಳಗೆ ಅನುಮೋದಿಸಲು ರಷ್ಯಾ ಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮೊದಲು ಈ ಲಸಿಕೆಯನ್ನು ಪಡೆಯಲಿದ್ದು, ಬಳಿಕ ಇದನ್ನು ಸಾರ್ವಜನಿಕ ಬಳಕೆಗೆ ಅನುಮೋದಿಸಲಾಗುವುದು ಎಂದು ರಷ್ಯಾ ಹೇಳಿದೆ.
ವರದಿಗಳ ಪ್ರಕಾರ, ರಷ್ಯಾದ ಲಸಿಕೆ ಇನ್ನೂ ಎರಡನೇ ಹಂತವನ್ನು ಪೂರ್ಣಗೊಳಿಸಲಿಲ್ಲ, ಆದರೆ ವಿಶ್ವದಾದ್ಯಂತ ಸಂಶೋಧನೆ ನಡೆಸುತ್ತಿರುವ ಕೆಲವು ಲಸಿಕೆಗಳು ಈಗಾಗಲೇ ಮೂರನೇ ಹಂತದ ಪ್ರಯೋಗಗಳಲ್ಲಿವೆ. ಮಾನವ ಪ್ರಯೋಗಗಳಲ್ಲಿ ಸೈನಿಕರು ಕೂಡ ಸ್ವಯಂಸೇವಕರಾಗಿ ಭಾಗವಹಿಸಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.