ಲವ್ ಮಾಕ್ಟೇಲ್ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಚಿತ್ರಮಂದಿರಗಳಿಂದ ಎತ್ತಂಗಡಿ ಆಗುವ ಸಂದರ್ಭದಲ್ಲಿ ಅಚ್ಚರಿ ರೀತಿಯಲ್ಲಿ ಗೆದ್ದು ಬೀಗಿದ ಚಿತ್ರ ಲವ್ ಮಾಕ್ಟೇಲ್. ಹೊಸ ರೀತಿಯ ಲವ್ ಸ್ಟೋರಿ ಹೇಳುವ ಮೂಲಕ ಚಿತ್ರರಸಿಕರ ಮನಗೆದ್ದಿದ್ದ ಚಿತ್ರತಂಡ ಇದೀಗ ಎರಡನೆಯ ಭಾಗಕ್ಕೆ ಕೈಹಾಕಿದೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರದ ಕಥೆ ಸಿದ್ಧಪಡಿಸಿರುವ ಡಾರ್ಲಿಂಗ್ ಕೃಷ್ಣ, ಚಿತ್ರೀಕರಣ ಆರಂಭಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ.
ಕಮಾಲ್ ಮಾಡಿದ್ದ ಆದಿ ಮತ್ತು ನಿಧಿಮಾ
ಲವ್ ಮಾಕ್ಟೇಲ್ ಸಿನಿಮಾದ ಮೊದಲ ಭಾಗದಲ್ಲಿ ಆದಿ ಮತ್ತು ನಿಧಿಮಾ ಪಾತ್ರಗಳಲ್ಲಿ ಡಾರ್ಲಿಂಗ್ ಕೃಷ್ಣ ಮಿಲನಾ ನಾಗರಾಜ್ ಕಮಾಲ್ ಮಾಡಿದ್ದರು. ಲವರ್ಸ್ ಎಂದ್ರೆ ಆದಿ ಮತ್ತಿ ನಿಧಿಮಾ ರೀತಿಯಲ್ಲಿರಬೇಕೆಂದು ಎಲ್ಲಾ ಹುಡುಗ-ಹುಡುಗಿಯರು ಅಂದುಕೊಳ್ಳುತ್ತಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಈ ಪಾತ್ರಗಳು ಭಾರಿ ಸದ್ದು ಮಾಡಿದ್ವು, ಮಾಡುತ್ತಿವೆ.
ಮೊದಲ ಭಾಗದಲ್ಲಿ ಎಲ್ಲರ ಹೃದಯ ಗೆದಿದ್ದ ‘ಆದಿ’ ಮತ್ತು ‘ನಿಧಿಮಾ’ ಈ ಚಿತ್ರದಲ್ಲಿಯೂ ಮೋಡಿ ಮಾಡಲು ಬಯಸಿದೆ. ಚಿತ್ರದ ಸ್ಕ್ರಿಪ್ಟ್ ಗೆ ಡಾರ್ಲಿಂಗ್ ಕೃಷ್ಣ ಮಿಲನಾ ನಾಗರಾಜ್ ಬುಧವಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾರ್ಲಿಂಗ್, ನಿಮ್ಮೆಲ್ಲ ಆಶೀರ್ವಾದದ ಅಗತ್ಯವಿದೆ. ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಮತ್ತು ನಿಮ್ಮೆಲ್ಲರ ನಿರೀಕ್ಷೆಗಳನ್ನು ಮುಟ್ಟಲು ಕಠಿಣವಾಗಿ ಶ್ರಮಿಸುತ್ತಿದ್ದೇವೆ. ಲವ್ ಮಾಕ್ಟೇಲ್ ಚಿತ್ರದ ಮುಂದುವರಿದ ಕಥೆಯಾಗಿ ಲವ್ ಮಾಕ್ಟೇಲ್ 2 ಇರಲಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಚಿತ್ರದಲ್ಲಿ ಮೊದಲ ಭಾಗದಲ್ಲಿ ಇದ್ದಂತೆಯೇ ಮನರಂಜನೆ ಸಿಗುವುದು ಗ್ಯಾರಂಟಿ ಎಂದು ನಟಿ ಮಿಲನಾ ನಾಗರಾಜ್ ಭರವಸೆ ನೀಡಿದ್ದಾರೆ.
ಲವ್ ಮಾಕ್ಟೇಲ್ -2 ಸಿನಿಮಾದಲ್ಲಿ ಮೊದಲ ಭಾಗದಲ್ಲಿ ಇದ್ದ ಕೆಲವು ಪಾತ್ರಗಳು ಇಲ್ಲಿಯೂ ಮುಂದುವರಿಯಲಿವೆ. ಹಾಗೆಯೇ ಹೊಸ ಪಾತ್ರಗಳೂ ಬರಲಿವೆ.