ಉಗ್ರರ ಜೊತೆ ಕಾದಾಡಿ ಗಾಯಗೊಂಡಿದ್ದ ಸೇನಾ ಶ್ವಾನ “ಜೂಮ್” ವಿಧಿವಶ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದ ಆರ್ಮಿ ಶ್ವಾನ ಜೂಮ್ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಜೂಮ್ ಶ್ವಾನವು ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ರ ಸುಮಾರಿಗೆ ನಿಧನವಾಯಿತು ಎಂದು ಸೇನಾ ಅಧಿಕಾರಿಗಳು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಜೂಮ್ 11.45 ರವರೆಗೂ ಉತ್ತಮವಾಗಿ ಸ್ಪಂದಿಸುತ್ತಿತ್ತು. ಆನಂತರ ಇದ್ದಕ್ಕಿದ್ದಂತೆ ಉಸಿರುಗಟ್ಟಲು ಪ್ರಾರಂಭಿಸಿ ಕುಸಿದಿತು ಎಂದು ತಿಳಿಸಿದ್ದಾರೆ.
ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಭಾನುವಾರ ರಾತ್ರಿ ಅನಂತನಾಗ್ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನ ಪ್ರಾರಂಭಿಸಲಾಗಿತ್ತು. ಉಗ್ರರು ಅಡಗಿರುವ ಶಂಕಿತ ತಾಣದ ಒಳಗೆ ಜೂಮ್ ನನ್ನ ಕಳುಹಿಸಲಾಗಿತ್ತು.
ಉಗ್ರಗಾಮಿಗಳನ್ನ ಪತ್ತೆಹಚ್ಚಿದ ನಂತರ ನಡೆದ ದಾಳಿಯಲ್ಲಿ ಶ್ವಾನಕ್ಕೆ ಎರಡು ಗುಂಡುಗಳು ತಗುಲಿದ್ದವು. ಜೂಮ್ ಗಾಯಗೊಂಡರೂ ಕೂಡ ಉಗ್ರರ ಮೇಲೆ ದಾಳಿ ಮಾಡುತ್ತಲೇ ಇತ್ತು ಎಂದು ಸೇನೆ ಹೇಳಿದೆ.
ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರನ್ನ ಹೊಡೆದುರುಳಿಸಲಾಗಿದೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ.
Wounded in anti-terror op, Indian Army dog Zoom passes away








