ಗುಂಡೇಟು ತಗುಲಿ ಐಪಿಎಸ್ ಅಧಿಕಾರಿ ಆರ್’ಪಿ ಶರ್ಮಾ ಗಂಭೀರ – ಆಕಸ್ಮಿಕವಾಗಿ ಗುಂಡು ಹಾರಿರುವುದಾಗಿ ಲಿಖಿತ ಹೇಳಿಕೆ
ಬೆಂಗಳೂರು, ಸೆಪ್ಟೆಂಬರ್02: ಹಿರಿಯ ಐಪಿಎಸ್ ಅಧಿಕಾರಿ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್ ಪಿ ಶರ್ಮಾ ಅವರಿಗೆ ಆಕಸ್ಮಿಕವಾಗಿ ಗುಂಡೇಟು ತಗುಲಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರನ್ನು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸಂಜೆ 5 ಗಂಟೆ ಸುಮಾರಿಗೆ ಈಶಾನ್ಯ ಬೆಂಗಳೂರಿನ ಕೊತ್ತನೂರಿ ಬಳಿಯ ತನ್ನ ಮನೆಯಲ್ಲಿ ಆರ್ ಪಿ ಶರ್ಮಾ (59) ರಿವಾಲ್ವರ್ ಅನ್ನು ಸ್ವಚ್ಛಗೊಳಿಸುವಾಗ ಈ ಘಟನೆ ನಡೆದಿದೆ.
ಆರ್.ಪಿ.ಶರ್ಮಾ ಅವರು ತಮ್ಮ ಖಾಸಗಿ ರಿವಾಲ್ವರ್ ಅನ್ನು ತಮ್ಮ ಮನೆಯಲ್ಲಿ ಸ್ವಚ್ಛಗೊಳಿಸುತ್ತಿದ್ದರು ಮತ್ತು ಅದನ್ನು ಲೋಡ್ ಮಾಡುತ್ತಿದ್ದಂತೆ, ಅದರಿಂದ ಆಕಸ್ಮಿಕವಾಗಿ ಗುಂಡು ಹಾರಿಸಲ್ಪಟ್ಟಿದೆ. ಅವರು ಗುಂಡಿಗೆ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು ಲಿಖಿತವಾಗಿ ನಮಗೆ ಸಂವಹನ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶರ್ಮಾ ಅವರು ತಮ್ಮ ರಿವಾಲ್ವರ್ ಮಾರಾಟ ಮಾಡಲು ಬಯಸಿದ್ದರು, ಆದ್ದರಿಂದ ಅವರು ಅದನ್ನು ಸ್ವಚ್ಛ ಗೊಳಿಸುತ್ತಿದ್ದರು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಗುಂಡಿನ ಶಬ್ದವನ್ನು ಕೇಳಿ, ಮನೆಯಲ್ಲಿದ್ದ ಶರ್ಮಾ ಅವರ ಮಗಳು ಬಂದು ನೋಡುವಾಗ ಅವರಿಗೆ ಗುಂಡೇಟು ತಗುಲಿ ರಕ್ತಸ್ರಾವವಾಗುತ್ತಿತ್ತು. ಕೂಡಲೇ ಶರ್ಮಾರನ್ನು ನಿಯೋಜಿಸಿದ ಸಿಬ್ಬಂದಿಯ ಸಹಾಯದಿಂದ ಆಸ್ಪತ್ರೆಗೆ ಸೇರಿಸಲಾಯಿತು.
ಪೊಲೀಸ್ ಉಪ ಆಯುಕ್ತ (ಈಶಾನ್ಯ) ಭೀಮಶಂಕರ್ ಎಸ್ ಗುಲೆದ್ ಅವರು ಈ ಘಟನೆಯ ಹಿಂದೆ ಯಾವುದೇ ಉದ್ದೇಶವನ್ನು ತಳ್ಳಿಹಾಕಿದ್ದಾರೆ ಮತ್ತು ಇದು ಕೇವಲ ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ. ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಶರ್ಮಾ ಅಥವಾ ಯಾವುದೇ ತರಬೇತಿ ಪಡೆದ ಅಧಿಕಾರಿಗೆ ತಮ್ಮನ್ನು ಸಾಯಿಸಿಕೊಳ್ಳಲು ಎರಡು ಗುಂಡುಗಳು ಅಗತ್ಯವಿಲ್ಲ. ಜೀವನವನ್ನು ಕೊನೆಗೊಳಿಸಲು ಕೇವಲ ಒಂದು ಗುಂಡು ಸಾಕು. ಇದಲ್ಲದೆ, ಶರ್ಮಾ ರಿವಾಲ್ವರ್ ಅನ್ನು ಸ್ವಚ್ಛಗೊಳಿಸುವಾಗ ಗುಂಡೇಟು ತಗುಲಿರುವುದಾಗಿ ಸ್ವತಃ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








