276 ಎಸೆತ.. 247 ಡಾಟ್ ಬಾಲ್.. ಏಳು ವಿಕೆಟ್.. ಟೀಮ್ ಇಂಡಿಯಾಗೆ ಕಂಟಕವಾಗಿ ಕಾಡಿದ ಕೈಲ್ ಜಾಮಿನ್ಸನ್..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಮಾರಕವಾಗಿ ಪರಿಣಮಿಸಿದ್ದು ನ್ಯೂಜಿಲೆಂಡ್ ನ ವೇಗಿ ಕೈಲ್ ಜಾಮಿನ್ಸನ್.
ನ್ಯೂಜಿಲೆಂಡ್ ನ ಈ ವೇಗದೂತನ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮೆನ್ ಗಳು ರನ್ ಗಳಿಸಲು ಒದ್ದಾಟವನ್ನೇ ನಡೆಸಿದ್ದರು. ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ರಿಷಬ್ ಪಂತ್, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಅವರ ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯವರು ಎರಡೂ ಇನಿಂಗ್ಸ್ ಗಳಲ್ಲೂ ಕೈಲ್ ಜೆಮಿನ್ಸನ್ ಅವರಿಗೆ ವಿಕೆಟ್ ಒಪ್ಪಿಸಿದ್ರು.
ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೈಲ್ ಜಾಮಿನ್ಸನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡ್ರು.
ಫೈನಲ್ ಟೆಸ್ಟ್ ಪಂದ್ಯದಲ್ಲಿ ಕೈಲ್ ಜಾಮಿನ್ಸನ್ ಅವರು ಒಟ್ಟು 46 ಓವರ್ ಗಳನ್ನು ಮಾಡಿದ್ದರು. ಅಂದ್ರೆ 276 ಎಸೆತಗಳನ್ನು ಎಸೆದಿದ್ದರು. ಇದ್ರಲ್ಲಿ 246 ಎಸೆತಗಳಲ್ಲಿ ಒಂದೇ ಒಂದು ರನ್ ನೀಡಿಲ್ಲ. ಎಲ್ಲವೂ ಡಾಟ್ ಬಾಲ್ ಗಳು. ಅಂದ್ರೆ ಇನ್ನುಳಿದ 29 ಎಸೆತಗಳಲ್ಲಿ ನೀಡಿರುವ ರನ್‍ಗಳು 61.
ಕೈಲ್ ಜಾಮಿನ್ಸನ್ ಮೊದಲ ಇನಿಂಗ್ಸ್ ನಲ್ಲಿ 22 ಓವರ್ ಗಳನ್ನು ಎಸೆದಿದ್ದರು. ಇದ್ರಲ್ಲಿ 12 ಮೇಡನ್ ಓವರ್ ಗಳು. ನೀಡಿರುವ ರನ್ 31. ಐದು ವಿಕೆಟ್ ಹಾಗೂ ಒಂದು ನೋಬಾಲ್ ಎಸೆತ.
ಇನ್ನು ಎರಡನೇ ಇನಿಂಗ್ಸ್ ನಲ್ಲಿ ಕೈಲ್ ಜಾಮಿನ್ಸನ್ ಟೀಮ್ ಇಂಡಿಯಾವನ್ನು ಕಾಡಿದ್ದ ಪರಿಯಂತೂ ಅದ್ಭುತವಾಗಿತ್ತು. 24 ಓವರ್ ಗಳನ್ನು ಮಾಡಿದ್ದ ಕೈಲ್ ಜಾಮಿನ್ಸನ್ ಅವರು 10 ಮೇಡನ್ ಓವರ್ ಮಾಡಿದ್ದರು. 30 ರನ್ ನೀಡಿ ಎರಡು ವಿಕೆಟ್ ಗಳನ್ನು ಉರುಳಿಸಿದ್ದರು. 1.20ರ ಸರಾಸರಿಯಲ್ಲಿ ರನ್ ನೀಡಿರುವ ಜಾಮಿನ್ಸನ್ ಅವರು ಒಂದು ನೋಬಾಲ್ ಮತ್ತು ಒಂದು ವೈಡ್ ಎಸೆತವನ್ನು ಹಾಕಿದ್ದರು.
ಎರಡನೇ ಇನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿಯವರ ವಿಕೆಟ್‍ಗಳನ್ನು ಕಬಳಿಸಿ ನ್ಯೂಜಿಲೆಂಡ್ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.
ಇನ್ನು ಮೊದಲ ಇನಿಂಗ್ಸ್ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಇಶಾಂತ್ ಶರ್ಮಾ ಹಾಗೂ ಜಸ್ಪ್ರಿತ್ ಬೂಮ್ರಾ ಅವರ ವಿಕೆಟ್ ಗಳನ್ನು ಕಬಳಿಸಿದ್ದರು.
6.6 ಅಡಿ ಎತ್ತರವಿರುವ ಕೈಲ್ ಜಾಮಿನ್ಸನ್ ಅವರು ಗಂಟೆಗೆ ಸರಾಸರಿ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಸದ್ಯ 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೈಲ್ ಜಾಮಿನ್ಸನ್ ಅವರು 46 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಇದರಲ್ಲಿsports ಐದು ಬಾರಿ ಐದಕ್ಕಿಂತ ಹೆಚ್ಚು ವಿಕೆಟ್ ಹಾಗೂ ಒಂದು ಬಾರಿ ಹತ್ತಕ್ಕಿಂತ ಹೆಚ್ಚು ವಿಕೆಟ್ ಹಾಗೂ 1 ಬಾರಿ ನಾಲ್ಕಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
2020ರಲ್ಲಿ ಭಾರತದ ವಿರುದ್ಧ ವೆಲ್ಲಿಂಗ್ಟನ್ ನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದುಕೊಂಡಿದ್ದರು. ಚೇತೇಶ್ವರ ಪೂಜಾರ ಮೊದಲ ಬಲಿಯಾದ್ರೆ, ಎರಡನೇ ವಿಕೆಟ್ ಒಪ್ಪಿಸಿದ್ದು ವಿರಾಟ್ ಕೊಹ್ಲಿ ಎಂಬುದು ವಿಶೇಷ.