ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ – ಮತ್ತೆ ನಿರಾಸೆ ಮೂಡಿಸಿದ ಶುಬ್ಮನ್ ಗಿಲ್ -ಕುತೂಹಲ ಮೂಡಿಸಿದ ಹೆಚ್ಚುವರಿ ದಿನದಾಟ…!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 32 ರನ್ ಮುನ್ನಡೆ ಸಾಧಿಸಿದೆ. ಪಂದ್ಯದ ಐದನೇ ದಿನ ನ್ಯೂಜಿಲೆಂಡ್ 249 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
32 ರನ್ ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ವೇಗಿ ಟೀಮ್ ಸೌಥಿ ಆಘಾತ ನೀಡಿದ್ರು.
ಆರಂಭಿಕ ಶುಬ್ಮನ್ ಗಿಲ್ ಎಂಟು ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಇನ್ನೊಂದೆಡೆ ರೋಹಿತ್ ಶರ್ಮಾ ಎರಡು ಬೌಂಡರಿಗಳ ಸಹಾಯದಿಂದ 30 ರನ್ ದಾಖಲಿಸಿ ಸೌಥಿಗೆ ವಿಕೆಟ್ ಒಪ್ಪಿಸಿದ್ರು.
ಐದನೇ ದಿನದ ಅಂತ್ಯಕ್ಕೆ ಚೇತೇಶ್ವರ ಪೂಜಾರ 12 ರನ್ ಹಾಗೂ ನಾಯಕ ವಿರಾಟ್ ಕೊಹ್ಲಿ 8 ರನ್ ಗಳೊಂದಿಗೆ ಹೆಚ್ಚುವರಿ ದಿನದ ಆಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕು ಮೊದಲು ನ್ಯೂಜಿಲೆಂಡ್ ತಂಡದ ರನ್ ವೇಗಕ್ಕೆ ಮಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಬ್ರೇಕ್ ಹಾಕಿದ್ರು. ಆರಂಭಿಕರಾದ ಟಾಮ್ ಲಥಾಮ್ (30 ರನ್), ಡೇವೊನ್ ಕಾನ್ವೊ (54 ರನ್ ) ಪಂದ್ಯದ ಮೂರನೇ ದಿನವೇ ಅಶ್ವಿನ್ ಮತ್ತು ಇಶಾಂತ್ ಗೆ ವಿಕೆಟ್ ಒಪ್ಪಿಸಿದ್ದರು.
ಐದನೇ ದಿನ ಬ್ಯಾಟಿಂಗ್ ಮುಂದುವರಿಸಿದ್ದ ರಾಸ್ ಟೇಲರ್ 11 ರನ್ ಗಳಿಸಿ ಶಮಿಗೆ ಬಲಿಯಾದ್ರು. ನಾಯಕ ಕೇನ್ ವಿಲಿಯಮ್ಸನ್ ಅಕರ್ಷಕ 49 ರನ್ ದಾಖಲಿಸಿದ್ರು. ಹಾಗೇ ಹೆನ್ರಿ ನಿಕೊಲಾಸ್ (7), ವಾಟಿಂಗ್ 1 ರನ್, ಕಾಲಿನ್ 13 ಹಾಗೂ ಕೈಲ್ ಜಾಮಿನ್ಸನ್ 13 ರನ್, ಟೀಮ್ ಸೌಥಿ 30 ರನ್, ಹಾಗು ನೇಲ್ (0) ಟ್ರೆಂಟ್ ಬೌಲ್ಟ್ ಅಜೇಯ 7 ರನ್ ದಾಖಲಿಸಿದ್ರು.
ಟೀಮ್ ಇಂಡಿಯಾ ಪರ ಮಹಮ್ಮದ್ ಶಮಿ 77ಕ್ಕೆ 4 ವಿಕೆಟ್ ಪಡೆದ್ರೆ, ಇಶಾಂತ್ ಶರ್ಮಾ 48ಕ್ಕೆ 3 ವಿಕೆಟ್ ಹಾಗೂ ಅಶ್ವಿನ್ ಎರಡು ವಿಕೆಟ್ ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದ್ರು.