ಸೋತು ಹೋದ ಟೀಮ್ ಇಂಡಿಯಾ..ನ್ಯೂಜಿಲೆಂಡ್ ಗೆ ಒಲಿದ ಚೊಚ್ಚಲ ಟೆಸ್ಟ್ ಚಾಂಪಿಯನ್ ಪ್ರಶಸ್ತಿ.. !
ನ್ಯೂಜಿಲೆಂಡ್ ಕ್ರಿಕೆಟ್ ತಂಡ ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್. ಚೊಚ್ಚಲ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಂಭ್ರಮ ಕೇನ್ ವಿಲಿಯಮ್ಸನ್ ಬಳಗದ್ದು. ಅಷ್ಟೇ ಅಲ್ಲ, ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಹಿರಿಮೆ ಕೂಡ ಕೀವಿಸ್ ತಂಡದ್ದಾಗಿದೆ.
ಸೌತಾಂಪ್ಟನ್ ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಆರನೇ ದಿನ ನಾಟಕೀಯ ತಿರುವು ಪಡೆದುಕೊಂಡಿತ್ತು. ಆರನೇ ದಿನವೇ ಫಲಿತಾಂಶವೇ ಹೊರಬರುತ್ತೆ ಅನ್ನೋ ನಿರೀಕ್ಷೆ ಇರಲಿಲ್ಲ. ಆದ್ರೆ ನಾಟಕೀಯ ಕುಸಿತ ಕಂಡ ಟೀಮ್ ಇಂಡಿಯಾವನ್ನು ಸುಲಭವಾಗಿ ಕಟ್ಟಿ ಹಾಕಲು ನ್ಯೂಜಿಲೆಂಡ್ ಬೌಲರ್ ಗಳು ಸಫಲರಾದ್ರು. ಆದ್ರೆ ಟೀಮ್ ಇಂಡಿಯಾದ ಬೌಲರ್ ಗಳು ನ್ಯೂಜಿಲೆಂಡ್ ಬ್ಯಾಟ್ಸ್ ಮೆನ್ ಗಳಿಗೆ ಸವಾಲೇ ಆಗಲಿಲ್ಲ. ಪರಿಣಾಮ ಹೆಚ್ಚುವರಿ ದಿನದ ಆಟದಲ್ಲಿ ನ್ಯೂಜಿಲೆಂಡ್ ಗೆಲುವಿನ ನಗೆ ಬೀರಿತ್ತು.
ಗೆಲ್ಲಲು ಕೇವಲ 137 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ನ್ಯೂಜಿಲೆಂಡ್ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ನಾಯಕ ಕೇನ್ ವಿಲಿಯಮ್ಸನ್ ಅಜೇಯ 52 ರನ್ ಹಾಗೂ ಮಾಜಿ ನಾಯಕ ರಾಸ್ ಟೇಲರ್ ಅಜೇಯ 47 ರನ್ ಗಳೊಂದಿಗೆ ಮೂರನೇ ವಿಕೆಟ್ ಅಜೇಯ 96 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ನ್ಯೂಜಿಲೆಂಡ್ ನ ಆರಂಭಿಕರಾದ ಟಾಮ್ ಲಥಾನ್ (9) ಮತ್ತು ಡೇವೊನ್ ಕಾನ್ವೊ (19) ಅವರನ್ನು ಆರಂಭದಲ್ಲೇ ಆರ್. ಆಶ್ವಿನ್ ಪೆವಿಲಿಯನ್ ಗೆ ಕಳುಹಿಸಿದ್ದರು. ನಂತರ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ತಾಳ್ಮೆ ಮತ್ತು ಜವಾಬ್ದಾರಿಯ ಆಟವನ್ನಾಡಿ ತಂಡದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದಕ್ಕು ಮೊದಲು ಟೀಮ್ ಇಂಡಿಯಾ ತನ್ನ ಎರಡನೇ ಇನಿಂಗ್ಸ್ ನಲ್ಲಿ 170 ರನ್ ಗಳಿಸುವಾಗಲೇ ಟೀಮ್ ಇಂಡಿಯಾದ ಸೋಲು ಖಚಿತವಾಗಿತ್ತು. ವಿರಾಟ್ ಕೊಹ್ಲಿ 13, ಪೂಜಾರ 15 ಹಾಗೂ ರಹಾನೆ 15 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದಾಗ ನ್ಯೂಜಿಲೆಂಡ್ ನ ಗೆಲುವಿನ ಲೆಕ್ಕಚಾರ ಶುರುವಾಗಿತ್ತು.
ಆದ್ರೆ ಈ ಹಂತದಲ್ಲಿ ರಿಷಬ್ ಪಂತ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಈ ನಡುವೆ ರವೀಂದ್ರ ಜಡೇಜಾ 16 ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರೆ, ರಿಷಬ್ ಪಂತ್ ಹೋರಾಟ 41 ರನ್ ಗೆ ಅಂತ್ಯಗೊಂಡಿತ್ತು. ಇನ್ನುಳಿದಂತೆ ಆಶ್ವಿನ್ 7 ರನ್, ಮಹಮ್ಮದ್ ಶಮಿ 13 ರನ್ ಹಾಗೂ ಜಸ್ಪ್ರಿತ್ ಬೂಮ್ರಾ ಶೂನ್ಯ ಸುತ್ತಿದ್ರು.
ನ್ಯೂಜಿಲೆಂಡ್ ತಂಡದ ಟೀಮ್ ಸೌಥಿ 48ಕ್ಕೆ 4 ವಿಕೆಟ್ ಹಾಗೂ ಟ್ರೆಂಟ್ ಬೌಲ್ಟ್ 39ಕ್ಕೆ 3 ವಿಕೆಟ್ ಹಾಗೂ ಕೈಲ್ ಜಾಮಿನ್ಸನ್ 30ಕ್ಕೆ 2 ವಿಕೆಟ್ ಪಡೆದ್ರು. ಫೈನಲ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಕೈಲ್ ಜಾಮಿನ್ಸನ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.